ADVERTISEMENT

ಅಸ್ಸಾಂ ಗೋಲಿಬಾರ್‌ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:31 IST
Last Updated 26 ಸೆಪ್ಟೆಂಬರ್ 2021, 3:31 IST
ಅಸ್ಸಾಂ ರಾಜ್ಯದ ಡರ್ರಾಂಗ್‌ ಜಿಲ್ಲೆಯಲ್ಲಿ ನಡೆದ ಪೊಲೀಸರ ಗುಂಡಿನ ದಾಳಿ ಖಂಡಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಕರ್ತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು
ಅಸ್ಸಾಂ ರಾಜ್ಯದ ಡರ್ರಾಂಗ್‌ ಜಿಲ್ಲೆಯಲ್ಲಿ ನಡೆದ ಪೊಲೀಸರ ಗುಂಡಿನ ದಾಳಿ ಖಂಡಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಕರ್ತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ‘ಒತ್ತುವರಿ ತೆರವು ನೆಪದಲ್ಲಿ ಅಸ್ಸಾಂನ ಡರ್ರಾಂಗ್‌ ಜಿಲ್ಲೆಯಲ್ಲಿ ನಡೆದ ಪೊಲೀಸರ ಗುಂಡಿನ ದಾಳಿಯ ಖಂಡನಾರ್ಹ. ಇದು ನಾಗರಿಕರ ಕಗ್ಗೊಲೆ’ ಎಂದು ಆರೋಪಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

‘ಅಸ್ಸಾಂನಲ್ಲಿ ಬಲವಂತದ ತೆರವು ಕಾರ್ಯಾಚರಣೆ ನಡೆದಿದೆ. ಇದರಿಂದ 4,500 ಬಡ ಹಾಗೂ ಅಸಹಾಯಕ ಜನ ಬೀದಿಪಾಲಾಗುತ್ತಾರೆ. ಇದನ್ನು ಖಂಡಿಸಿ ಸಾಮಾನ್ಯ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಅವರ ಹಕ್ಕು ಕಸಿದುಕೊಳ್ಳುವ ಉದ್ದೇಶದಿಂದ ಮಹಿಳೆಯರು, ಮಕ್ಕಳು, ವೃದ್ಧರ ಮೇಲೂ ಪೊಲೀಸರು ಮನಸೋ ಇಚ್ಚೆ ಹೊಡೆದಿದ್ದಾರೆ. ಗೋಲಿಬಾರ್‌ ಮಾಡಿ ಅಮಾಯಕರನ್ನು ಕೊಲೆ ಮಾಡಿದ್ದಾರೆ’ ಎಂದೂ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ADVERTISEMENT

‘ಅಸ್ಸಾಂನಲ್ಲಿ ಬಂಗಾಳಿ ಭಾಷಿಗ ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಇಂಥ ದಾಳಿಗಳು ಪದೇಪದೇ ನಡೆಯುತ್ತಿವೆ. ಅಲ್ಲಿನ ಬಿಜೆಪಿ ಸರ್ಕಾರ ರಾಜ್ಯದ ಜನಸಾಮಾನ್ಯರ ವಿರುದ್ಧ ನಡೆದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಘೋರ ಅನ್ಯಾಯ ತಡೆಯಲು ನ್ಯಾಯಾಂಗವು ಮಧ್ಯಪ್ರವೇಶಿಸಬೇಕು. ಈಗಾಗಲೇ ಹೊರ ಹಾಕಿದ ಕುಟುಂಬಗಳಿಗೆ ಮರಳಿ ಪುನರ್ವಸತಿ ಕಲ್ಪಿಸಬೇಕು. ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂಘಟನೆಯ ಜಿಲ್ಲಾ ಘಟಕದ ಚೇರ್ಮನ್‌ ಒಎಂಎಂ ಸಲಾಮ್‌ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.