ಅಫಜಲಪುರ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬುಧವಾರ ಪಟ್ಟಣದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿಗಳನ್ನ ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಶಾಂತಾ ಘಂಟೆ ಮಾತನಾಡಿ, ‘ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು ಅಲ್ಲಿಯವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸರ್ಕಾರಿ ನೌಕರರಿಗೆ ನೀಡುವ ವೇತನವನ್ನು ಎಲ್ಲಾ ಕ್ಷೇತ್ರಗಳ ನೌಕರರಿಗೂ ನೀಡಬೇಕು ನೀಡಬೇಕು’ ಎನ್ನುವುದೂ ಸೇರಿ 37 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ, ಕಾರ್ಯದರ್ಶಿ ಗುರು ಚಾಂದಕೋಟೆ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಜಾರಿಗೊಳಿಸಿವೆ. ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ರೈತ ವಿರೋಧಿಯಾಗಿದ್ದು ಕೇವಲ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಮತ್ತು 14 ಗಂಟೆಗೆ ಏರಿಕೆ ಮಾಡಲು ಮುಂದಾಗಿರುವ ಕ್ರಮದಿಂದ ಹಿಂದೆ ಸರಿಯಬೇಕು’ ಎಂದರು.
ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ತಾ.ಪಂ ಇಒ ವೀರಣ್ಣ ಕೌಲಗಿ ಮತ್ತು ತಹಶೀಲ್ದಾರ್ ಸಂಜುಕುಮಾರ ದಾಸರ ಸಂಘಟನೆಗಳ ಮುಖಂಡರು ಮನಿವಿ ಪತ್ರ ಸಲ್ಲಿಸಿದರು.
ಸುಮಾರು ಒಂದು ಗಂಟೆಗಳ ಕಾಲ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟಿಸಿದ್ದರಿಂದ ಕೆಲಕಾಲ ಜನರಿಗೆ ತೊಂದರೆ ಆಯಿತು.
ಬಿಸ್ಮಿಲ್ಲಾ ಖೇಡಗಿ, ಕಲಾವತಿ ಯಳಸಂಗಿ, ಸಿದ್ದಮ್ಮ ನಾಗೋಜಿ, ಕಾಂಚನ ಕಾಂಬಳೆ, ಭೋಜರಾಜ್ ಪಾಟೀಲ, ಮಹಾದೇವ ಜಮಾದಾರ, ಸುರೇಶ ತಾವರಕೇಡ್, ಮೋಸಿನ್ ಖುರೇಶಿ, ಯಶವಂತ್ ಪಟ್ಟೆದಾರ್, ಅರ್ಜುನ, ಶಾಂತಮಲ್ಲಪ್ಪ, ರಜಿಯಾಬೇಗಂ, ಅಪ್ಪಸಾಬ್ ಪಾಟೀಲ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.