ADVERTISEMENT

ಲಿಂಗಾಯತ ಧರ್ಮ: ಕಲಬುರ್ಗಿಯಲ್ಲಿ ಸಚಿವ ಡಿಕೆಶಿ ಪ್ರತಿಕೃತಿ ದಹಿಸಿ ಪ್ರತಿಭಟನೆ

ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 12:26 IST
Last Updated 20 ಅಕ್ಟೋಬರ್ 2018, 12:26 IST
ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು
ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದವರು ನಗರದ ಜಗತ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು.

‘ಒಬ್ಬ ಲಿಂಗಾಯತ ಕೋಟಿ ಲಿಂಗಾಯತ’ ಎಂದು ಘೋಷಣೆ ಕೂಗುತ್ತ, ಸಚಿವ ಡಿಕೆಶಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸೌಲಭ್ಯ ಮತ್ತು ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. 2018ರ ವಿಧಾನಸಭೆ ಚುನಾವಣೆ ಜರುಗಿ ಆರು ತಿಂಗಳಾದ ಬಳಿಕ ಅದರಲ್ಲೂ ಉಪ ಚುನಾವಣೆ ನಡೆಯುವ ಈ ಸಮಯದಲ್ಲಿ ಲಿಂಗಾಯತದ ಧರ್ಮದ ನಿಲುವಿನಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಡಿಕೆಶಿ ಹೇಳಿಕೆ ನೀಡಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಕಾರಣ ಲಿಂಗಾಯತರು ಹೆಚ್ಚಾಗಿರುವ ಪ್ರದೇಶ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂಬುದನ್ನು ಸಚಿವರು ಅವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಚಿವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪಕ್ಷದ ವರಿಷ್ಠರು ಡಿಕೆಶಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಎಸ್.ಮಹಾಗಾಂವಕರ, ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ, ಮುಂಖಡರಾದ ರವೀಂದ್ರ ಶಾಬಾದಿ, ಸೋಮಣ್ಣ ನಡಕಟ್ಟಿ, ಅಯ್ಯಣ್ಣಗೌಡ ಪಾಟೀಲ, ಕುಪೇಂದ್ರ ಪಾಟೀಲ, ಶಿವಶರಣ ದೇಗಾಂವ, ಜಗದೀಶ ಪಾಟೀಲ, ಶರಣಪ್ಪ ನಿರಗುಡಿ, ಸಿದ್ರಾಮ ಯಳವಂತಗಿ, ಮಹಾಂತೇಶ ಕಲಬುರ್ಗಿ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ, ಸುನಿಲ್ ಹುಡಗಿ, ಅಶೋಕ ಘೂಳಿ, ಮಲ್ಲಣ್ಣ ನಾಗರಾಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.