
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಅಲಿಯಾಸ್ ಆರ್.ಡಿ.ಪಾಟೀಲನನ್ನು ಕೊನೆಗೂ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಜನವರಿ 28ರಂದು ಸ್ಥಳಾಂತರಿಸಲಾಗಿದೆ.
ಕಾರಾಗೃಹದ ಆಡಳಿತ, ಭದ್ರತೆಯ ಹಿತದೃಷ್ಟಿಯಿಂದ ಮತ್ತು ಜೈಲಿನ ಅಧಿಕಾರಿ–ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವ ದೃಷ್ಟಿಯಿಂದ ಆರ್.ಡಿ.ಪಾಟೀಲ ಸ್ಥಳಾಂತರಿಸಲಾಗುತ್ತಿದೆ ಎಂದು ಕಲಬುರಗಿ ಕೇಂದ್ರ ಕಾರಾಗೃಹವು ಆದೇಶದಲ್ಲಿ ಹೇಳಿದೆ.
ರಾಜ್ಯದ ವಿವಿಧೆಡೆ 20ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಆರ್.ಡಿ.ಪಾಟೀಲ 2023 ನವೆಂಬರ್ 11ರಿಂದ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದ. ಕಳೆದ ಎರಡ್ಮೂರು ತಿಂಗಳಲ್ಲಿ ಜೈಲು ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಬಳಿಕ ಆತನ ಸ್ಥಳಾಂತರಕ್ಕೆ ಜೈಲಿನ ಅಧಿಕಾರಿಗಳು ಪತ್ರ ಬರೆದಿದ್ದರು.
ಈ ಬೆನ್ನಲ್ಲೆ ಆರ್.ಡಿ.ಪಾಟೀಲ ಜೈಲಿನ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದ್ದ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದಾದ ಕೆಲವೇ ದಿನಗಳಲ್ಲಿ ಜೈಲಿನಲ್ಲಿ ಕೈದಿಗಳು ಮದ್ಯ ಕುಡಿಯುತ್ತ, ಇಸ್ಪೀಟ್ ಆಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಜೈಲಿನಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಶಂಕೆ ವ್ಯಕ್ತವಾಗಿತ್ತು.
ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕಾರಾಗೃಹಗಳ ಇಲಾಖೆಯ ಡಿಜಿಪಿ ಅಲೋಕಕುಮಾರ್ ಆದೇಶಿಸಿದ್ದರು. ಅದರಂತೆ ತನಿಖೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.