
ಕಲಬುರಗಿ: ‘ದ್ವಿತೀಯ ಪಿಯು ಫಲಿತಾಂಶ ವೃದ್ಧಿಸಿ ಕಲಬುರಗಿ ಜಿಲ್ಲೆಯನ್ನು ಕೊನೆಯ ಸ್ಥಾನದಿಂದ ಗೌರವಯುತ ಸ್ಥಾನಕ್ಕೇರಲು ಶ್ರಮವಹಿಸುವುದು ಅಗತ್ಯ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸುರೇಶ ಅಕ್ಕಣ್ಣ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನ ವಾರ್ಷಿಕ ಸ್ನೇಹಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದ ಕಾಲೇಜಿನ ಪ್ರಾಂಶುಪಾಲ ಮತ್ತು ಆಡಳಿತಾಧಿಕಾರಿಗಳನ್ನು ಇಲಾಖೆ ವತಿಯಿಂದಲೇ ಗೌರವಿಸಲು ತೀರ್ಮಾನಿಸಲಾಗಿದೆ’ ಎಂದರು.
ಎಸ್‌ವಿಪಿಇ ಟ್ರಸ್ಟ್ ಅಧ್ಯಕ್ಷ ಕೆ.ವಿಜಯಮೋಹನ, ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ನಿರಂತರ ಪರಿಶ್ರಮ ಪಟ್ಟು ಅಧ್ಯಯನ ನಡೆಸಿದರೆ ಯಶಸ್ಸು ಸಿಗುತ್ತದೆ’ ಎಂದರು.
ಟ್ರಸ್ಟ್ ಕಾರ್ಯದರ್ಶಿ ಕೆ.ಎನ್.ಕುಲಕರ್ಣಿ, ಆರ್.ಜೆ.ಕಾಲೇಜಿನ ಪ್ರಾಂಶುಪಾಲ ಭುರ್ಲಿ ಪ್ರಹ್ಲಾದ ಮಾತನಾಡಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿದ್ಯಾರ್ಥಿಗಳಿಗೆ ಸತ್ಕಾರ: ಪ್ರಸಕ್ತ ಶೈಕ್ಷಣಿಕ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಪ್ರತೀಕ ಮತ್ತು ಸೌಮ್ಯ, ನಿರಂತರ ಹಾಜರಾತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಆದಿತ್ಯಾ ಪಾಟೀಲ, ರಕ್ಷಿತಾ ರಾಠೋಡ ಹಾಗೂ ಗ್ರಾಮೀಣ ಭಾಗದಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ವ್ಯಾಸಂಗ ಮಾಡಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಗತಿ ಸಾಧಿಸುತ್ತಿರುವ ಕಾಲೇಜಿನ ವಿದ್ಯಾರ್ಥಿಗಳಾದ ಧೂಳಪ್ಪ ಪೂಜಾರಿ ಮತ್ತು ಅಂಬಿಕಾ ಅಂಬಾರಾಯ ಅವರಿಗೆ ಉತ್ತಮ ಜಾಣ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.