ADVERTISEMENT

ವಾಡಿ| ಲಾಡ್ಲಾಪುರ, ರಾವೂರಿಗೆ ಪಬ್ಲಿಕ್ ಶಾಲೆ ಮಂಜೂರು: ₹3.10 ಕೋಟಿ ಅನುದಾನ

ಸಿದ್ದರಾಜ ಎಸ್.ಮಲಕಂಡಿ
Published 15 ನವೆಂಬರ್ 2025, 7:16 IST
Last Updated 15 ನವೆಂಬರ್ 2025, 7:16 IST
ಲಾಡ್ಲಾಪುರ ಶಾಲೆಯ ನೋಟ
ಲಾಡ್ಲಾಪುರ ಶಾಲೆಯ ನೋಟ   

ವಾಡಿ: ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ, ಶಹಾಬಾದ್ ತಾಲ್ಲೂಕಿನ ರಾವೂರು ಗ್ರಾಮಕ್ಕೆ ನೂತನ ಪಬ್ಲಿಕ್ ಶಾಲೆ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎರಡೂ ಗ್ರಾಮಗಳಲ್ಲಿ ಕಾಲೇಜು ಶಿಕ್ಷಣ ಆರಂಭಗೊಳ್ಳಲಿದ್ದು ಉನ್ನತ ಅಭ್ಯಾಸಕ್ಕಾಗಿ ಅಲೆದಾಟ ತಪ್ಪಲಿದೆ.

ಒಂದೇ ಸೂರಿನಡಿ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ತರಗತಿ ವರೆಗೆ ಮಗು ಇಚ್ಚಿಸುವ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ.

ಈ ಶಾಲೆಗಳಲ್ಲಿ ಈಗಾಗಲೇ ಇಂಗ್ಲಿಷ್ ಮಾಧ್ಯಮ ಶಾಲೆ ನಡೆಯುತ್ತಿದ್ದು 2026ನೇ ಸಾಲಿನಿಂದ ಕಾಲೇಜು ಶಿಕ್ಷಣ ಆರಂಭಗೊಳ್ಳಲಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 1ನೇ ತರಗತಿಯಿಂದ ಪಿಯುಸಿವರೆಗೆ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

ADVERTISEMENT

ಬೋಧನಾ ಗುಣಮಟ್ಟ ಸುಧಾರಣೆಗಾಗಿ ಸ್ಮಾರ್ಟ್‌ ಕ್ಲಾಸ್‌, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳಿಗೆ ಪ್ರಯೋಗಾಲಯ, ಕಂಪ್ಯೂಟರ್‌, ಕ್ರೀಡಾ ಕೋಣೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ವೃತ್ತಿ, ಶಿಕ್ಷಣ, ಕಲೆ, ಸಂಗೀತ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಯೋಗ ಶಿಕ್ಷಣ ಅನುಷ್ಠಾನಗೊಳಿಸಲಾಗುವುದು.

ಲಾಡ್ಲಾಪುರ ಮತ್ತು ರಾವೂರು ಗ್ರಾಮಗಳಲ್ಲಿ ಕೆಪಿಎಸ್‌ಗಾಗಿ ಎರಡು ಅಂತಸ್ತಿನ ಕೋಣೆಗಳ ಸುಸುಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಟ್ಟು ₹3.10 ಕೋಟಿ ಅನುದಾನ ಬಂದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ
ರಜನಿಕಾಂತ್ ಶೃಂಗೇರಿ ಎಇಇ ಪಂಚಾಯತ್ ರಾಜ್ ಇಲಾಖೆ ಚಿತ್ತಾಪುರ
ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ದೃಷ್ಟಿಯಿಂದ ಒಂದೇ ಅಂಗಳದಲ್ಲಿ ಎಲ್‌ಕೆಜಿಯಿಂದ ಕಾಲೇಜು ಕಲಿಕೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಮತ್ತಷ್ಟು ಪಬ್ಲಿಕ್ ಶಾಲೆಗಳು ಬರಲಿವೆ
ಪ್ರಿಯಾಂಕ್ ಖರ್ಗೆ ಸಚಿವ 

ಲಾಡ್ಲಾಪುರ: ₹1.65 ಕೋಟಿ ಮಂಜೂರು 

ಲಾಡ್ಲಾಪುರ ಗ್ರಾಮದಲ್ಲಿ 10 ಸುಸುಜ್ಜಿತ ಕೋಣೆಗಳ ನಿರ್ಮಾಣಕ್ಕಾಗಿ ₹1.65 ಕೋಟಿ ಹಾಗೂ ರಾವೂರು ಗ್ರಾಮದಲ್ಲಿ ₹1.45 ಕೋಟಿ ಮಂಜೂರು ಮಾಡಲಾಗಿದ್ದು ಇನ್ನೇನು ಕಾಮಗಾರಿ ಆರಂಭಗೊಳ್ಳಬೇಕಿದೆ. ಕೇಳಸ್ತರದಲ್ಲಿ 5 ಮತ್ತು ಮೇಲುಸ್ತರದಲ್ಲಿ 5 ಕೋಣೆಗಳ ನಿರ್ಮಾಣಕ್ಕೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅನುದಾನ ಮಂಜೂರು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.