ADVERTISEMENT

ಗೃಹಿಣಿಯನ್ನು ಕರೆದೊಯ್ದ ವ್ಯಕ್ತಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:09 IST
Last Updated 8 ಮಾರ್ಚ್ 2021, 5:09 IST

ಕಲಬುರ್ಗಿ: ಬೇರೊಬ್ಬರ ಜೊತೆ ಮದುವೆಯಾದ ಗೃಹಿಣಿಯನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಮಾನಸಿಕ ಕಿರುಕುಳ ನೀಡಿದ ಯುವಕನಿಗೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್‌. ಅವರು ಒಂದು ವರ್ಷ ಸದಾ ಕಾರಾಗೃಹ ಶಿಕ್ಷೆ ಮತ್ತು ₹ 12 ಸಾವಿರ ದಂಡ ವಿಧಿಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರದ ಮಿಲನಕುಮಾರ ಹಯ್ಯಾಳಕರ ಶಿಕ್ಷೆಗೊಳಗಾದ ಯುವಕ. ನಗರದ ಖೂಬಾ ಪ್ಲಾಟ್‌ನ ಮಹಿಳೆಗೆ 9 ವರ್ಷಗಳ ಹಿಂದೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೂ ಪಟ್ಟುಬಿಡದ ಮಿಲನಕುಮಾರ ಗೃಹಿಣಿಗೆ ಜೀವ ಬೆದರಿಕೆ ಹಾಕಿ ಕರೆದೊಯ್ದಿದ್ದ. ಈ ಮುಂಚೆಯೂ ಮದುವೆಯಾಗುವುದಾಗಿ ತಿಳಿಸಿದ್ದ. ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ತಮ್ಮ ಮಗಳನ್ನು ಯುವಕ ಕರೆದೊಯ್ದಿರುವ ಕುರಿತು ತಾಯಿ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಬ್ರಹ್ಮಪುರ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಎಸ್‌.ಎಂ. ಯಾಳಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್. ಅವರು ತೀರ್ಪು ಪ್ರಕಟಿಸಿದರು.

ADVERTISEMENT

ಸರ್ಕಾರದ ಪರವಾಗಿ 4ನೇ ಹೆಚ್ಚುವರಿ ಸಹಾಯಕ ಸರ್ಕಾರಿ ಅಭಿಯೋಜಕಿ ವೀಣಾ ಎಸ್. ರೆಡ್ಡಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.