ADVERTISEMENT

PV Web Exclusive: ಕಲಬುರ್ಗಿಯಲ್ಲೀಗ ‘ವಿಜನ್‌–2050’ ಸದ್ದು

ಗಣೇಶ ಚಂದನಶಿವ
Published 29 ಜೂನ್ 2021, 11:47 IST
Last Updated 29 ಜೂನ್ 2021, 11:47 IST
ಕಲಬುರ್ಗಿ ಜಿಲ್ಲೆ ನಕ್ಷೆ
ಕಲಬುರ್ಗಿ ಜಿಲ್ಲೆ ನಕ್ಷೆ   

ಕಲಬುರ್ಗಿ ಜಿಲ್ಲೆಯ ಜನತೆಯಲ್ಲಿ ಈಗ ‘ವಿಜನ್‌–2050’ರ ಕನಸು ಬಿತ್ತಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆಯೇ ಅಭಿವೃದ್ಧಿ ಯೋಜನೆಗಳ ನೀಲನಕ್ಷೆ ಸಿದ್ಧಪಡಿಸುವುದಾಗಿ ಹೇಳಿ, ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಅಷ್ಟಕ್ಕೂ ಈ ಯೋಜನೆ ಏಕೆ ಬೇಕು? ಅದರ ಅನುಷ್ಠಾನ ಸಾಧ್ಯವೇ? ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗುತ್ತಿದ್ದಂತೆ ಈ ಯೋಜನೆಯೂ ‘ಕಣ್ಮರೆ’ಯಾಗುತ್ತದೆಯೇ? ಇದೊಂದು ಕಣ್ಣೊರೆಸುವ ತಂತ್ರವೇ? ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆ ಬೇಕಲ್ಲವೇ? ಎಂಬಂತಹ ಚರ್ಚೆಗಳೂ ಜಿಲ್ಲೆಯಲ್ಲಿ ನಡೆಯುತ್ತಿವೆ.

ಹೈದರಾಬಾದ್‌ ನಿಜಾಮರ ಆಡಳಿತಕ್ಕೊಳಪಟ್ಟಿದ್ದ ಈ ಭಾಗ, ಅಭಿವೃದ್ಧಿಯಲ್ಲಿ ಈಗಲೂ ಹಿಂದೆ ಬಿದ್ದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಸಂವಿಧಾನದ 371 (ಜೆ)ಗೆ ತಿದ್ದುಪಡಿ ತಂದು ಕಲಬುರ್ಗಿ ಕಂದಾಯ ವಿಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ.

ADVERTISEMENT

ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ವಿಶೇಷ ಕಾಯ್ದೆ ರೂಪಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಭಾಗದವರಿಗೆ ಮೀಸಲಾತಿ ಕಲ್ಪಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವಾರ್ಷಿಕ ₹1500 ಕೋಟಿ ಅನುದಾನ ಘೋಷಿಸಿದೆ.

ಇಷ್ಟೇ ಅಲ್ಲ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ತಮ್ಮ ಒಡನಾಡಿ, ರಾಜ್ಯಸಭೆಯ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅಧ್ಯಕ್ಷತೆಯಲ್ಲಿ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವನ್ನು ರಚಿಸಿದ್ದಾರೆ. ಇದಕ್ಕೂ ವಾರ್ಷಿಕ ₹500 ಕೋಟಿ ಅನುದಾನವನ್ನು ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಕೊರೊನಾ ಸಂಕಷ್ಟದ ಕಾರಣಕ್ಕಾಗಿ ಕೆಕೆಆರ್‌ಡಿಬಿ ಹಾಗೂ ಈ ಸಂಘಕ್ಕೆ ಘೋಷಣೆಯಾಗಿರುವಷ್ಟು ಅನುದಾನದ ಹಂಚಿಕೆಯಾಗಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರ ನೀಡುವ ಅನುದಾನದ ವೆಚ್ಚಕ್ಕೆ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮಾನತೆ ನಿವಾರಣಾ ಸಮಿತಿ ನೀಡಿರುವ ವರದಿಯೇ ಮಾನದಂಡ. ಈ ಸಮಿತಿ ಗುರುತಿಸಿರುವ ಹಿಂದುಳಿದಿರುವ ತಾಲ್ಲೂಕುಗಳ ಮಾನದಂಡದ ಆಧಾರದ ಮೇಲೆ ಆಯಾ ತಾಲ್ಲೂಕುಗಳಿಗೆ ಅನುದಾನವನ್ನು ಮಂಡಳಿ ಹಂಚಿಕೆ ಮಾಡಬೇಕು ಎಂಬುದು ನಿಯಮ.

ಏತನ್ಮಧ್ಯೆ, ಸಚಿವ ನಿರಾಣಿ ಅವರು ಪ್ರತ್ಯೇಕವಾಗಿಯೇ ನೀಲನಕ್ಷೆಯನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜನಪ್ರತಿನಿಧಿಗಳು, ಪರಿಣತರು, ಅಧಿಕಾರಿಗಳನ್ನು ಒಳಗೊಂಡ 15 ಸಮಿತಿಗಳನ್ನು ರಚಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಶಾಸಕರು–ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡ ಜಿಲ್ಲಾ ಮಟ್ಟದ ಪ್ರಧಾನ ಸಮಿತಿಯೂ ಇರಲಿದೆ.ಈ ಸಮಿತಿ ಸಭೆ ಸೇರಿ ಮುಂದಿನ 30 ವರ್ಷಗಳಲ್ಲಿ ಕಲಬುರ್ಗಿ ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಮತ್ತು ಯಾವೆಲ್ಲ ರಂಗಗಳಲ್ಲಿ ಏನೆಲ್ಲ ಕೆಲಸ ಆಗಬೇಕು ಎಂಬ ನೀಲನಕ್ಷೆ ತಯಾರಿಸುವುದು ಈ ಯೋಜನೆಯ ಉದ್ದೇಶ.

ಇಂತಹ ಸಮಿತಿಗಳನ್ನು ರಚಿಸಿದ್ದಾಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಈಗಾಗಲೇ ಹೇಳಿದ್ದರು. ಸಮಿತಿಯಲ್ಲಿ ತಮ್ಮ ಸಂಸ್ಥೆಗೂ ಪ್ರಾತಿನಿಧ್ಯ ನೀಡುವಂತೆ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ‘ಇನ್ನೂ ಸಮಿತಿಗಳು ರಚನೆಯಾಗಿಲ್ಲ. ಕರಡು ಸಿದ್ಧಪಡಿಸಲಾಗಿದೆಯಷ್ಟೇ’ ಎಂದು ಸಚಿವರು ಸಮಜಾಯಿಷಿ ನೀಡಿ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಿದ್ದೂ ಆಗಿದೆ.

ಅನುದಾನ ಹೊಂದಾಣಿಕೆ ಹೇಗೆ?: ‘ಈ ಯೋಜನೆಯನ್ನು ಕೆಕೆಆರ್‌ಡಿಬಿ ಇಲ್ಲವೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಿಂದ ಕೈಗೆತ್ತಿಕೊಂಡಿದ್ದರೆ ಸೂಕ್ತವಾಗುತ್ತಿತ್ತು. ಈ ಸಂಸ್ಥೆಗಳಿಗೆ ಸರ್ಕಾರ ಅನುದಾನ ನೀಡುತ್ತಿದ್ದು,ಈ ಯೋಜನೆಗೆ ವೆಚ್ಚಮಾಡಲು ಅವಕಾಶ ಇತ್ತು’ ಎಂಬುದು ಹೆಸರು ಬಹಿರಂಗ ಪಡಿಸಲು ಒಲ್ಲದ ಹಿರಿಯ ರಾಜಕಾರಣಿಯೊಬ್ಬರ ಸಲಹೆ.

‘ಅಭಿವೃದ್ಧಿಗೆ ಯೋಜನೆ ರೂಪಿಸುವುದು ಅವಶ್ಯ. ಹಸರೀಕರಣ, ವೈದ್ಯಕೀಯ ಉಪಕರಣ ಉತ್ಪಾದನಾ ಪಾರ್ಕ್‌, ಕೌಶಲ ಅಭಿವೃದ್ಧಿ ತರಬೇತಿಯಂತಹ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಅವಶ್ಯಕತೆ ಇದೆ ಎಂದು ನಾನೂ ಸಲಹೆ ನೀಡಿದ್ದೇನೆ.ಯಾವುದೇ ಯೋಜನೆ ಇದ್ದರೂ ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳುವುದು ಮುಖ್ಯ’ ಎನ್ನುತ್ತಾರೆ ರಾಜ್ಯಮಟ್ಟದ ‘ದಿಶಾ’ ಸಮಿತಿ ಸದಸ್ಯೆ,ಕಲಬುರ್ಗಿಯ ಅರ್ಥಶಾಸ್ತ್ರ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ.

‘ಕಲಬುರ್ಗಿ ಜಿಲ್ಲೆಯನ್ನು ಸರ್ವರಂಗಗಳಲ್ಲಿ ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶ.ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಹೀಗೆ ಮೂರು ಹಂತಗಳ ಯೋಜನೆ ರೂಪಿಸಲಾಗುವುದು.‌ ಶೈಕ್ಷಣಿಕ ಪ್ರಗತಿ ಮತ್ತು ಫಲಿತಾಂಶ ಸುಧಾರಣೆಯಂತಹ ತ್ವರಿತ ಕ್ರಮಗಳೂ ಇದರಲ್ಲಿ ಇರಲಿವೆ’ ಎನ್ನುವುದು ಸಚಿವ ಮುರುಗೇಶ ನಿರಾಣಿ ಅವರ ಹೇಳಿಕೆ.

‘ಈ ಭಾಗದ ಅಭಿವೃದ್ಧಿಗೆ ಡಾ.ಡಿ.ಎಂ. ನಂಜುಂಡಪ್ಪ ಅವರು ನೀಡಿದ ವರದಿ, ಕೆಕೆಆರ್‌ಡಿಬಿ ಸಿದ್ಧಪಡಿಸಿದ ಮೂಲಸೌಕರ್ಯಗಳ ವರದಿ, ಹಿಂದಿನ ಯೋಜನೆಗಳ ವೈಫಲ್ಯಕ್ಕೆ ಕಾರಣಗಳು... ಹೀಗೆ ಎಲ್ಲವನ್ನೂ ಪರಿಶೀಲಿಸಿಯೇ ಸಮಗ್ರ ಯೋಜನೆ ರೂಪಿಸಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.