ADVERTISEMENT

18 ದಿನದ ನಂತರವೂ ಮುಗಿಯದ ಕ್ವಾರಂಟೈನ್‌

20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಇದ್ದಾರೆ 1200ಕ್ಕೂ ಹೆಚ್ಚು ವಲಸೆ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 29 ಮೇ 2020, 11:59 IST
Last Updated 29 ಮೇ 2020, 11:59 IST

ಯಡ್ರಾಮಿ: ಮುಂಬೈನಿಂದ ಮರಳಿದ ಮೇಲೆ ಕ್ವಾರಂಟೈನ್‌ ಮಾಡಿ, ಗುರುವಾರಕ್ಕೆ (ಮೇ 28) 18 ದಿನಗಳು ಮುಗಿದಿವೆ. ಈವರೆಗೆ ಗಂಟಲು ಮಾದರಿಯನ್ನೂ ತಪಾಸಣೆ ಮಾಡಿಲ್ಲ, ಮನೆಗೆ ತೆರಳಲೂ ಅವಕಾಶ ನೀಡುತ್ತಿಲ್ಲ ಎಂದು ಕೆಲವು ಕ್ವಾರಂಟೈನ್‌ ಕೇಂದ್ರಗಳ ಜನ ದೂರಿದ್ದಾರೆ.

ಯಡ್ರಾಮಿ ಪಟ್ಟಣ, ತಾಲ್ಲೂಕಿನ ಬಳಬಟ್ಟಿ, ಮಳ್ಳಿ, ಕುರಳಗೇರಾ, ಕಡಕೋಳ, ಬಿಳವಾರ, ಸೈದಾಪುರ, ಇಜೇರಿ, ಅರಳಗುಂಡಗಿ, ಆಲೂರ ಸೇರಿದಂತೆ ಸುಮಾರು 20 ಕ್ವಾರಂಟೈನ್ ಕೇಂದ್ರಗಳಲ್ಲಿ 1,276 ವಲಸೆ ಕಾರ್ಮಿಕರಿದ್ದಾರೆ. ಇದರಲ್ಲಿ ಬಹುತೇಕರು 15 ರಿಂದ 18 ದಿನಗಳ ಕ್ವಾರಂಟೈನ್ ಕೇಂದ್ರದಲ್ಲಿದ್ದವರು. ಕಾರಣ, ತಮ್ಮನ್ನು ನಮಗೆ ಮನೆಗೆ ಹೋಗಲು ಬಿಡಿ ಎಂದು ಮಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಸಂದರ್ಭವೂ ಗುರುವಾರ ನಡೆಯಿತು.

‘ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದವರೂ ಸೇರಿದಂತೆ 80 ಜನರಿದ್ದೇವೆ. ಕೊರೊನಾ ಸೋಂಕಿನ ಯಾವ ಲಕ್ಷಣಗಳು ಸಹ ನಮ್ಮಲ್ಲಿ ಕಂಡು ಬಂದಿಲ್ಲ. ಆದರೂ ಅಧಿಕಾರಿಗಳು ನಮಗೆ ಮನೆಗೆ ಹೋಗಲು ಬಿಡುತ್ತಿಲ್ಲ’ ಎಂದು ಬಳಬಟ್ಟಿ ಶಾಲೆಯಲ್ಲಿ ಕ್ವಾರಂಟೈನ್‍ ಆದವರು ಅಳಲು ತೋಡಿಕೊಂಡರು.

ADVERTISEMENT

‘ನಮ್ಮಲ್ಲಿ ಯಾವುದೇ ರೋಗದ ಲಕ್ಷಣ ಕಂಡುಬಂದಿಲ್ಲ. ನಾವೇಕೆ ಶಿಕ್ಷೆ ಅನುಭವಿಸಬೇಕು? ಫ್ಯಾನ್‍ಗಳೇ ಇಲ್ಲದ ಕೋಣೆಯಲ್ಲಿ ಗಾಳಿ ಇಲ್ಲದೇ, ಧಗೆಯಲ್ಲಿ ಪರದಾಡುತ್ತಿದ್ದೇವೆ. ಮಕ್ಕಳ ಸ್ಥಿತಿ ನೋಡಲಾಗುತ್ತಿಲ್ಲ. ನಮ್ಮನ್ನು ಬಿಡುಗಡೆ ಮಾಡದಿದ್ದರೆ, ನಾವೇ ಮನೆಗೆ ಓಡಿ ಹೋಗುತ್ತೇವೆ’ ಎಂದೂ ಮಹಿಳೆಯರ ಆಕ್ರೋಶ ಹೊರಹಾಕಿದರು.

ಸಮಸ್ಯೆ ಆಲಿಸಿದ ಪಿಎಸ್‍ಐ ಗಜಾನಂದ ಬಿರಾದಾರ, ‘ನಿಮ್ಮನ್ನು ಕ್ವಾರಂಟೈನ್‍ನಲ್ಲಿ ಅನಗತ್ಯವಾಗಿ ಕೂಡಿಹಾಕಿದರೆ ನಮಗೆನೂ ಲಾಭವಿಲ್ಲ. ನಿಮಗೆ ಊಟ, ಉಪಾಹಾರ, ನೀರು, ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕಿದೆ. ಗಂಟಲು ದ್ರವ ಪರೀಕ್ಷೆ ವರದಿ ಬಂದ ತಕ್ಷಣವೇ ಬಿಡುಗಡೆ ಮಾಡಲಾಗುವುದು’ ಎಂದು ಸಮಾಧಾನ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.