ADVERTISEMENT

ಕಲಬುರಗಿ | ಗುರುಸಾರ್ವಭೌಮರ ಆರಾಧನೆ ಸಂಪನ್ನ

ಮೂರು ದಿನ ವೈಭವದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:08 IST
Last Updated 13 ಆಗಸ್ಟ್ 2025, 4:08 IST
ಕಲಬುರಗಿಯ ಎನ್‌ಜಿಒ ಕಾಲೊನಿ ರಾಯರ ಮಠದಲ್ಲಿ ರಾಯರ ಉತ್ತರಾರಾಧನೆ ಅಂಗವಾಗಿ ಮಂಗಳವಾರ ತೊಟ್ಟಿಲೋತ್ಸವ ಜರುಗಿತು
ಕಲಬುರಗಿಯ ಎನ್‌ಜಿಒ ಕಾಲೊನಿ ರಾಯರ ಮಠದಲ್ಲಿ ರಾಯರ ಉತ್ತರಾರಾಧನೆ ಅಂಗವಾಗಿ ಮಂಗಳವಾರ ತೊಟ್ಟಿಲೋತ್ಸವ ಜರುಗಿತು   

ಕಲಬುರಗಿ: ಮೂರು ದಿನಗಳ ಆರಾಧನೆಯ ಕೊನೆಯ ದಿನವಾದ ಮಂಗಳವಾರ ವೈಭವದ ಉತ್ತರಾರಾಧನೆಯೊಂದಿಗೆ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಉತ್ತರಾರಾಧನೆ ಅಂಗವಾಗಿ ನಗರದ ಹಳೇ ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೊನಿಯ ರಾಯರ ಮಠ, ಎಂ.ಬಿ.ನಗರದ ರಾಯರ ಮಠ, ಬ್ರಹ್ಮಪುರದ ಉತ್ತರಾದಿಮಠ, ಬಿದ್ದಾಪುರ ಕಾಲೊನಿಯ ನಂಜನಗೂಡು ರಾಯರ ಮಠ,‌ ಜಗತ್‌ ಸಮೀಪದ ಗೋಮುಖ ರಾಘವೇಂದ್ರ ಸ್ವಾಮಿ ಮಠದಲ್ಲಿ, ಪ್ರಶಾಂತ ಕಾಲೊನಿಯ ಹನುಮಾನ ಮಂದಿರ ಸೇರಿದಂತೆ ಹಲವೆಡೆ ರಾಯರ ತೊಟ್ಟಿಲೋತ್ಸವ, ಗುರುಸಾರ್ವಭೌಮರ ರಥೋತ್ಸವ, ವಿಶೇಷ ಪೂಜೆ, ತೀರ್ಥ–ಪ್ರಸಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಎನ್‌ಜಿಒ ಕಾಲೊನಿಯ ರಾಯರ ಮಠದಲ್ಲಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತದೊಂದಿಗೆ ಉತ್ತರಾರಾಧನೆ ಶುರುವಾಯಿತು. ಬಳಿಕ ಪುಷ್ಪ ಅಲಂಕಾರ, ಅಷ್ಟೋತ್ತರ ಪಾರಾಯಣ ನಡೆಯಿತು. ಬೆ.10.30ರ ಹೊತ್ತಿಗೆ ರಜತ ರಥೋತ್ಸವ, ಮಹಾರಥೋತ್ಸವ ಜರುಗಿದವು. ಬಳಿಕ ತೊಟ್ಟಿಲೋತ್ಸವ ನಡೆಯಿತು. ತದನಂತರ ಹಸ್ತೋದಕ, ತೀರ್ಥ–ಪ್ರಸಾದ, ಸಂಜೆ ದಾಸವಾಣಿ  ಕಾರ್ಯಕ್ರಯ ನಡೆಯಿತು. ರಾತ್ರಿ ಮಹಾ ಮಂಗಳಾರತಿ ನಡೆಯಿತು.

ADVERTISEMENT

ಎಂ.ಬಿ.ನಗರದ ರಾಯರ ಮಠದಲ್ಲೂ ಉತ್ತರಾರಾಧನೆ ಸಡಗರ ಮನೆ ಮಾಡಿತ್ತು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ತೀರ್ಥ ಪ್ರಸಾದ ನಡೆಯಿತು. ಗೋಪಾಲಾಚಾರ್ಯ ಅಕಮಂಚಿ ಪ್ರವಚನ ನೀಡಿದರು. ಸಂಜೆ ಸಂಗೀತ ಕಾರ್ಯಕ್ರಮ ಜರುಗಿತು. ಅಧ್ಯಕ್ಷ ಸದಾನಂದ ಅಗ್ನಿಹೋತ್ರಿ, ರಂಗನಾಥ ದೇಸಾಯಿ, ಶಾಮರಾವ ಅಂಕಲಗಿ, ರಾಘವೇಂದ್ರ ಬೋರಗಾಂವಕರ, ಗಿರೀಶ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಶಾಂತ ನಗರ ಹನುಮಾನ ಮಂದಿರದಲ್ಲಿ ಉತ್ತರಾರಾಧನೆ ಅಂಗವಾಗಿ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, 1008 ರಾಘವೇಂದ್ರ ರಾಯರ ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ, ವಿಶೇಷ ಅಲಂಕಾರ ನಡೆಯಿತು. ಬಳಿಕ ಭಜನಾ ಸೇವೆ, ಹಸ್ತೋದಕ, ತೀರ್ಥ–ಪ್ರಸಾದ ವಿತರಣೆ ಜರುಗಿತು.

ನಂತರ ಪ್ರವೀಣ ಟೆಂಗಳಿ ಅವರಿಂದ ನೃತ್ಯ ಸೇವೆ, ಜ್ಯೋತಿ ದೇಸಾಯಿ ಅವರಿಂದ ಸಂಗೀತ ಸೇವೆ ನಡೆಯಿತು. ಅರ್ಚಕ ಗುಂಡಾಚಾರ್ಯ ನರಿಬೋಳ, ಡಿ.ವಿ.ಕುಲಕರ್ಣಿ, ಗುರುರಾಜ ಬಂಕುರ್, ಶಾಮರಾವ್ ಕುಲಕರ್ಣಿ, ವಿಜಯಕುಮಾರ ದೇವನಹಳ್ಳಿ, ಗೋಪಾಲರಾವ್‌ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಲಬುರಗಿಯ ಬಸವೇಶ್ವರನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾರಾಧಾನೆ ಅಂಗವಾಗಿ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು

ಮೂರು ದಿನಗಳ ಆರಾಧನೆಗೆ ತೆರೆ ಶ್ರದ್ಧಾಭಕ್ತಿಯ ಪಾರಾಯಣ, ಭಜನೆ ವಿವಿಧೆಡೆ ತೀರ್ಥ–ಪ್ರಸಾದ ವಿತರಣೆ

ರಜತ ರಥೋತ್ಸವ ಸಡಗರ ನಗರದ ಉತ್ತರಾದಿ ಮಠದಲ್ಲಿ ರಾಘವೇಂದ್ರ ರಾಯರ ಉತ್ತರಾರಾಧನೆ ಅಂಗವಾಗಿ ಮಂಗಳವಾರ ಸಂಜೆ ವೈಭವದ ರಜತ ರಥೋತ್ಸವ ನಡೆಯಿತು. ಬೆಳಿಗ್ಗೆ ಸುಪ್ರಭಾತ ಅಷ್ಟೋತ್ತರ ಪಾರಾಯಣ ವಿಶೇಷ ಅಲಂಕಾರ ಮಧ್ಯಾಹ್ನ ತೀರ್ಥ–ಪ್ರಸಾದ ವಿದ್ವಾಂಸರಿಂದ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.