ಕಲಬುರಗಿ: ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುವ ಮೂಲಕ ಶಾಸಕ ಬಿ.ಆರ್. ಪಾಟೀಲ ಅವರು ಮಂತ್ರಿಗಿರಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನವೊಲಿಸುವ ತಂತ್ರ ಮಾಡುತ್ತಿದ್ದಾರೆ’ ಎಂದು ಆಳಂದ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಮತಗಳ್ಳತನ ಮಾಡಿದ್ದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನೇ ಆಯ್ಕೆಯಾಗುತ್ತಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಆರ್.ಪಾಟೀಲ ಅವರನ್ನು ಮಂತ್ರಿ ಮಾಡುತ್ತಿಲ್ಲ. ಹಾಗಾಗಿ ರಾಹುಲ್ ಗಾಂಧಿ ಅವರ ಮೂಲಕ ಹೇಳಿಸಿ ಮಂತ್ರಿಯಾಗಲು ಮತಗಳ್ಳತನದ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಆರೋಪಿಸಿದರು.
ಎಸ್‌ಐಟಿ ಶೋಧದ ವೇಳೆ ಆಳಂದದಲ್ಲಿರುವ ಮನೆಯ ಎದುರು ಮತದಾರರ ಪಟ್ಟಿ, ಮತದಾರರ ಚೀಟಿಗಳನ್ನು ಸುಟ್ಟಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುತ್ತೇದಾರ, ‘ಆ ವೇಳೆ ನಾನು ಮನೆಯಲ್ಲಿರಲಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮನೆ ಸ್ವಚ್ಛ ಮಾಡುವುದು ಸಹಜ. ನಮ್ಮ ಮನೆಯಾಳುಗಳು ಮನೆಯಲ್ಲಿದ್ದ ತ್ಯಾಜ್ಯವನ್ನು ಸುಟ್ಟಿದ್ದಾರೆ. ಅದೂ ಅಲ್ಲದೇ ನಾನು ಮಾಜಿ ಎಂಎಲ್‌ಎ ಆಗಿರುವುದರಿಂದ ಮತದಾರರ ಪಟ್ಟಿ ಇರುವುದು ಸಾಮಾನ್ಯ’ ಎಂದು ಸರ್ಮಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.