ADVERTISEMENT

ರಾಹುಲ್ ಗಾಂಧಿ, ಕಾಂಗ್ರೆಸ್‌ನವರು ಚೋರರು

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 10:22 IST
Last Updated 19 ಮಾರ್ಚ್ 2019, 10:22 IST
ಎನ್‌.ರವಿಕುಮಾರ್
ಎನ್‌.ರವಿಕುಮಾರ್   

ಕಲಬುರ್ಗಿ: ‘ಚೌಕಿದಾರ್ ಚೋರ್ ಹೈ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರೇ ಚೋರರು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿರುಗೇಟು ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂವಿಧಾನ, ಸುಪ್ರೀಂಕೋರ್ಟ್ ಮೇಲೆ ನಂಬಿಕೆ, ಗೌರವ ಇದ್ದರೆ ಭ್ರಷ್ಟಾಚಾರ ಎಂಬ ಪದ ಬಳಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಪರಿವರ್ತನಾ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಬ್ಬರ್ ಸ್ಟ್ಯಾಂಪ್‌ನಂತೆ ಬಳಸಿಕೊಂಡು ಕಾಂಗ್ರೆಸ್‌ನವರು ₹12.50 ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. ಪ್ರಧಾನಿಗೆ ಚೋರ್ ಎನ್ನುವ ರಾಹುಲ್ ಗಾಂಧಿ, ಉಗ್ರ ಅಜರ್ ಮಸೂದ್‌ಗೆ ಜಿ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ಕಿಡಿ ಕಾರಿದರು.

ADVERTISEMENT

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ₹48 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಇದುವರೆಗೆ ₹4,600 ಕೋಟಿ ಮಾತ್ರ ಮನ್ನಾ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 12 ಕೋಟಿ ರೈತರ ಖಾತೆಗೆ ಪ್ರತಿ ವರ್ಷ ₹6 ಸಾವಿರ ಜಮಾ ಮಾಡುವ ಶಾಶ್ವತ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರೈತ ಜೀವಂತ ಇರುವವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ’ ಎಂದರು.

‘ಡಾ.ಉಮೇಶ ಜಾಧವ ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿ. ಅವರ ರಾಜೀನಾಮೆ ಅಂಗೀಕಾರವಾಗುವ ವಿಶ್ವಾಸವಿದೆ. ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ಪಕ್ಷದಲ್ಲೇ ಇದ್ದಾರೆ. ಅವರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಪಾಟೀಲ, ಶಾಸಕ ಸುಭಾಷ ಆರ್.ಗುತ್ತೇದಾರ, ಮುಖಂಡರಾದ ದಯಾಘನ ಧಾರವಾಡಕರ್, ಸುಭಾಸ ಬಿರಾದಾರ, ನಾಮದೇವ ರಾಠೋಡ, ಚಂದ್ರಕಾಂತ ಪಾಟೀಲ, ಮಾಧ್ಯಮ ಪ್ರಮುಖ್ ಸಂಗಣ್ಣ ಇಜೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.