ಚಿತ್ತಾಪುರ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಗುರುವಾರವೂ ಮುಂದುವರೆದಿದೆ.
ಆಗೊಮ್ಮೆ ಈಗೊಮ್ಮೆ ಎನ್ನುವಂತೆ ದಿನವಿಡಿ ಮಳೆ ಬರುತ್ತಿದ್ದು, ಹೊಲಗಳಲ್ಲಿ ಮಳೆ ನೀರು ನಿಂತು ಬೆಳೆ ಹಾನಿಯಾಗುವ ಆತಂಕ ರೈತರಲ್ಲಿ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಬೆಳೆ ಹಾನಿ ಖಚಿತ ಎನ್ನುತ್ತಾರೆ ರೈತರು.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತಿವೆ. ಹೆಸರು, ಉದ್ದು, ತೊಗರಿ ಬೆಳೆಗಳು ನೀರಿನಲ್ಲಿ ಮುಳುಗುತ್ತಿವೆ. ಕೆಲವು ದಿನಗಳ ಹಿಂದ ಮಳೆಗಾಗಿ ರೈತರು ಎದುರು ನೋಡುತ್ತಿದ್ದರು. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಹಚ್ಚಹಸಿರಿನಿಂದ ನಳನಳಿಸುವ ದೃಶ್ಯ ಕಡೆಯಾದರೆ, ಬೆಳೆ ಹಾನಿಯ ಚಿಂತೆ ಮತ್ತೊಂದೆಡೆ ರೈತರನ್ನು ಕಾಡುತ್ತಿದೆ.
ಬಿಡುವು ನೀಡದ ಮಳೆಯಿಂದ ರೈತರ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿವೆ. ತೊಗರಿ ಬೆಳೆಯಲ್ಲಿ ಕುಂಟೆ ಹೊಡೆಯುವುದು, ಕಳೆ ನಾಶಕ ಸಿಂಪಡಿಸುವುದು, ಹೆಸರು ಮತ್ತು ಉದ್ದು ಬೆಳೆಗಳಿಗೆ ಕೀಟಗಳ ಹಾವಳಿ ನಿಯಂತ್ರಣಕ್ಕೆಂದು ಕೀಟನಾಶಕ ಸಿಂಪಡಿಸುವ ಕೆಲಸ ನಿಂತಿದೆ. ಹೂವಾಡುತ್ತಿರುವ ಮತ್ತು ಕಾಯಿಯಾಗಿರುವ ಹಂತದಲ್ಲಿನ ಹೆಸರು ಬೆಳೆಗೆ ಕೀಟಗಳ ಹಾವಳಿ ಹೆಚ್ಚಾದರೆ ಹೇಗೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.
ದಿನವಿಡಿ ಮಳೆ ಬರುತ್ತಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲೆಡೆ ಮಳೆ ಬರುತ್ತಿದ್ದರಿಂದ ಹೊಲಗಳಲ್ಲಿ ತೇವಾಂಶ ಅಧಿಕಗೊಂಡು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಬುಧವಾರ ರಾತ್ರಿ ಚಿತ್ತಾಪುರ 28 ಮಿ.ಮೀ, ಅಳ್ಳೊಳ್ಳಿ-40.2, ನಾಲವಾರ 19.2, ಗುಂಡಗುರ್ತಿ 11 ಮಿ.ಮೀ ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.