ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆಯು ಬುಧವಾರ ತಗ್ಗಿದೆ. ಆದರೆ, ನದಿಗಳಲ್ಲಿ ನೀರಿನಮಟ್ಟ ಇನ್ನೂ ಇಳಿಕೆಯಾಗಿಲ್ಲ.
ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳಹರಿವು ಅಧಿಕವಾಗಿದ್ದು, 30 ಕ್ರೆಸ್ಟ್‌ಗೇಟ್‌ಳಿಂದ 2.60 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ನದಿ ತೀರದ ಇತಿಹಾಸ ಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಶಹಾಪುರ ತಾಲ್ಲೂಕಿನ ಕೊಳ್ಳುರ ಗ್ರಾಮದ ಹತ್ತಿರದ ಸೇತುವೆಗೆ ಹೊಂದಿಕೊಂಡು ನದಿ ನೀರು ಹರಿಯುತ್ತಿದೆ. ನೀರಿನಮಟ್ಟ ಹೆಚ್ಚಿದರೆ ಸೇತುವೆ ಜಲಾವೃತವಾಗಲಿದೆ.
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ 1.10 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದ್ದು, ಅಫಜಲಪುರ ಭಾಗದಲ್ಲಿ ಪ್ರವಾಹದ ಎದುರಾಗುವ ಸಾಧ್ಯತೆಗಳಿವೆ.
ಕಲಬುರಗಿ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದ ತನಕ ಜಿಟಿಜಿಟಿ ಮಳೆ ಮುಂದುವರಿದಿತ್ತು. ಮಧ್ಯಾಹ್ನದ ನಂತರ ಬಿಸಿಲಿನ ದರ್ಶನವಾಯಿತು.
ಕೊಪ್ಪಳದಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾಗಿದೆ. ಬೀದರ್ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನವಿಡೀ ಬಿಟ್ಟು ಬಿಟ್ಟು ಜಿಟಿಜಿಟಿ ಮಳೆಯಾಗಿದೆ. ಕಾರಂಜಾ ಜಲಾಶಯ ಭರ್ತಿಯಾಗಿದ್ದು, ಸತತ ಮೂರನೇ ದಿನವೂ ನದಿಗೆ ನೀರು ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.