ಕಲಬುರಗಿ: ಶ್ರಾವಣ ಮಾಸ ಗುರುವಾರದ ನಾಗರ ಅಮಾವಾಸ್ಯೆಯೊಂದಿಗೆ ಆರಂಭಗೊಂಡಿದ್ದು, ಶ್ರಾವಣ ಸಂಭ್ರಮಕ್ಕೆ ಮಳೆಯೂ ಮೆರುಗು ನೀಡಿತ್ತು. ಹಲವು ದೇವಸ್ಥಾನಗಳಲ್ಲಿ ಭಕ್ತಿಯ ಪಾರಮ್ಯ, ಮಳೆಯ ಸಿಂಚನ ಕಂಡುಬಂತು.
ಶ್ರಾವಣ ಮಾಸದಲ್ಲಿ ವಾರದ ಪ್ರತಿದಿವಸವೂ ಒಂದಿಲ್ಲೊಂದು ಆಚರಣೆ ನಡೆಯುವುದರಿಂದ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶೇಷ ಸ್ಥಾನ ಪಡೆದಿದೆ. ಭೀಮನ ಅಮಾವಾಸ್ಯೆಯೊಂದಿಗೆ (ನಾಗರ ಅಮಾವಾಸ್ಯೆ) ಆರಾಧನೆಗಳು ಶುರುವಾಗುತ್ತವೆ.
ಜಿಟಿಜಿಟಿ ಮಳೆ ಸುರಿದರೂ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡುಬಂತು. ಶರಣಬಸವೇಶ್ವರ ದೇವಸ್ಥಾನ, ಕೋರಂಟಿ ಹನುಮಾನ ದೇವಸ್ಥಾನ, ರಾಮಮಂದಿರ, ರಾಮತೀರ್ಥ ಮಂದಿರ, ಸಾಯಿಮಂದಿರ, ಗಣೇಶ ಮಂದಿರ, ರಾಯರ ಮಠ, ಈಶ್ವರ ದೇವಸ್ಥಾನ, ಸಿದ್ಧಿ ವಿನಾಯಕ, ಅಂಬಾಭವಾನಿ, ಯಲ್ಲಮ್ಮದೇವಿ ದೇವಸ್ಥಾನಗಳಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಪೂಜೆ ಸಲ್ಲಿಸಿದರು.
ಗಾಣಗಾಪುರ ದತ್ತಾತ್ರೇಯ ಮಹಾರಾಜ, ಘತ್ತರಗಿ ಭಾಗ್ಯವಂತಿ ದೇವಸ್ಥಾನ, ಮಣ್ಣೂರಿನ ಯಲ್ಲಮ್ಮದೇವಿ, ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ, ನೈವೇದ್ಯ, ಕುಂಕುಮಾರ್ಚನೆ, ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಹಾಗೂ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.
ಅಪ್ಪನ ದರ್ಶನಕ್ಕೆ ಜನಸಾಗರ: ಶರಣಬಸವೇಶ್ವರ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಬೆಳಿಗ್ಗೆಯಿಂದಲೇ ಪಾದಯಾತ್ರೆ ಮೂಲಕ ಬಂದರು. ಎರಡು ಸಾಲುಗಳಲ್ಲಿ ನಿಂತು ಗರ್ಭಗುಡಿಯಲ್ಲಿದ್ದ ಗುರುಮರುಳಾರಾಧ್ಯರ–ಶಿಷ್ಯೋತ್ತಮ ಶರಣಬಸವೇಶ್ವರರ ಗದ್ದುಗೆಯ ದರ್ಶನ ಪಡೆದರು.
ಶರಣಬಸವೇಶ್ವರರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಬಿಲ್ವಪತ್ರೆ, ಹೂವು, ಕಾಯಿ, ಕರ್ಪೂರ ಮಾರಾಟ ಜೋರಾಗಿತ್ತು.
ಬೀರಲಿಂಗೇಶ್ವರ ಪುರಾಣಕ್ಕೆ ಚಾಲನೆ:
ದನಗರಗಲ್ಲಿಯಲ್ಲಿ ರೇವಣಸಿದ್ದೇಶ್ವರ ಕೋರಿಮಠ ತರುಣ ಸಂಘ ಮತ್ತು ವಿದ್ಯಾವರ್ಧಕ ಸಂಘದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಬೀರಲಿಂಗೇಶ್ವರ ಪುರಾಣಕ್ಕೆ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಚಾಲನೆ ನೀಡಿದರು. ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಅವರನ್ನು ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಕರೆತರಲಾಯಿತು. ರೇವಣಸಿದ್ದೇಶ್ವರ ದೇವಾಲಯ ಕಟ್ಟಡದ ನೀಲನಕ್ಷೆ ಅನಾವರಣಗೊಳಿಸಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕವೂ ಮಾಡಲಾಯಿತು. ಮಹಾಪುರಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಗಿನೆಲೆ ತಿಂಥಣಿ ಬ್ರಿಜ್ ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ದಾಸೋಹ ಮೂರ್ತಿ ಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.