
ಕಾಳಗಿ ತಾಲ್ಲೂಕಿನ ಭರತನೂರ–ರಾಜಾಪುರ ನಡುವೆ ಶನಿವಾರ ಸಂಜೆ ಸಿಡಿಲಿಗೆ ಸತ್ತಿರುವ ಮೇಕೆಗಳು
ಕಾಳಗಿ: ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಮಳೆ ಆಗಿದೆ. ಸಿಡಿಲು ಬಡಿದು ಭರತನೂರ–ರಾಜಾಪುರ ನಡುವೆ ಸೀಮೆಯಲ್ಲಿ 21 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು 4 ಗಾಯಗೊಂಡಿವೆ.
ರಾಜಾಪುರ ಗ್ರಾಮದ ಮೂವರು ಕುರಿಗಾಹಿ ಹುಡುಗರು ಮೇಕೆ ಮೇಯಿಸಲು ಹೊಲಗಳಿಗೆ ಹೋಗಿದ್ದಾಗ ಸಂಜೆ 5ರ ಸುಮಾರಿಗೆ ಗುಡುಗು ಸಹಿತ ಮಳೆ ಬರಲಾರಂಭಿಸಿದೆ. ಈ ವೇಳೆ ಮೇಕೆಗಳು ಗಿಡದ ಆಸರೆಯಲ್ಲಿ ನಿಂತು, ಹುಡುಗರು ಬೇರೆಕಡೆ ಇದ್ದಾಗ ಈ ಘಟನೆ ಸಂಭವಿಸಿದೆ.
ಮೃತ ಮೇಕೆಗಳಲ್ಲಿ ಶಿವಶಂಕ್ರಪ್ಪ ಅವರಿಗೆ ಸೇರಿದ 13, ಕಾಂತಪ್ಪ ಅವರ 5, ಅರವಿಂದ ಅವರ 1 ಮತ್ತು ಮರೆಮ್ಮ ಎಂಬುವವರ 2 ಮೇಕೆ ಸೇರಿವೆ ಎನ್ನಲಾಗಿದೆ. ಕಾಳಗಿ ಪಿಎಸ್ಐ ವಿಶ್ವನಾಥ ಬಾಕಳೆ, ಗ್ರಾಮ ಆಡಳಿತಾಧಿಕಾರಿ ರವಿಕಿರಣ, ಪಶು ವೈದ್ಯ ಡಾ.ಗೌತಮ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಾಡಬೂಳ, ಕೋರವಾರ, ಶ್ರೀಕ್ಷೇತ್ರ ರೇವಗ್ಗಿ ಗುಡ್ಡ, ಮಂಗಲಗಿ, ಕೊಡದೂರ, ಗೋಟೂರ ಇತರೆಡೆ ಗುಡುಗು–ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಕಾಳಗಿ, ಕೋಡ್ಲಿ ಪ್ರದೇಶದಲ್ಲಿ ಗುಡುಗು–ಮಿಂಚಿನ ಮಧ್ಯೆ ಸಾಧರಣ ಮಳೆ ರಾತ್ರಿಯೂ ಮುಂದುವರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.