ADVERTISEMENT

ಸ್ವಾತಂತ್ರ್ಯಕ್ಕೆ ಸೇಡಂ, ಮುಧೋಳ ಕೊಡುಗೆ ಅಪಾರ: ರಾಜಕುಮಾರ ಪಾಟೀಲ ತೆಲ್ಕೂರ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:06 IST
Last Updated 29 ಮೇ 2022, 4:06 IST
ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶನಿವಾರ ನಡೆದ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವರನ್ನು ವಿಶೇಷವಾಗಿ ಸತ್ಕರಿಸಲಾಯಿತು
ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶನಿವಾರ ನಡೆದ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವರನ್ನು ವಿಶೇಷವಾಗಿ ಸತ್ಕರಿಸಲಾಯಿತು   

ಸೇಡಂ: ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೇಡಂ ಮತ್ತು ತಾಲ್ಲೂಕಿನ ಮುಧೋಳ ಗ್ರಾಮದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋ್ದಲ್ಲಿ ಶನಿವಾರ ನಡೆದ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಸರ್ಕಾರಗಳು ಇತಿಹಾಸವನ್ನು ತಿರುಚುತ್ತಿದ್ದವು. ನಮ್ಮ ಸರ್ಕಾರ 'ಅಮೃತ ಭಾರತಿಗೆ ಕನ್ನಡದಾರತಿ' ವಿನೂತನ ಕಾರ್ಯಕ್ರಮ ಆಯೋಜನೆ ಮೂಲಕ ಇತಿಹಾಸವನ್ನು ಸರಿಯಾಗಿ ಸ್ಮರಿಸುವಂತಹ ಕೆಲಸ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ದೇಶವನ್ನು ಸಶಕ್ತ ವನ್ನಾಗಿ ಮುನ್ನಡೆಸುತ್ತಿದ್ದಾರೆ. 2030ರಲ್ಲಿ ಜಗತ್ತಿಗೆ ಭಾರತ ಗುರುವಾಗಲಿದೆ. ನಿಟ್ಟಿನಲ್ಲಿ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಲಿದೆ ಎಂದರು.

ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಶರಭೇಂದ್ರಸ್ವಾಮಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ಈ ಭಾಗದ ಜನರ ಪರಿಶ್ರಮ ಹಿರಿದಾಗಿದೆ. ಗಾಂಧೀಜಿ ಅವರ ಸ್ವಾತಂತ್ರ್ಯದ ಹೋರಾಟ ಶಸ್ತ್ರರಹಿತವಾಗಿದ್ದರೆ, ಮುಧೋಳ ಭಾಗದ ಜನರು ಶಸ್ತ್ರ ಸಹಿತವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಉಲ್ಲೇಖಿಸಿದರು.

ವಿಶೇಷ ಸತ್ಕಾರ: ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದ ಕುಟುಂಬಸ್ಥರಾದ ಸೂರ್ಯಕಾಂತ ತಿರುಮಲ, ಯಾದವ ರೆಡ್ಡಿ ಮುನ್ನೂರ್, ವಿಜಯಕುಮಾರ ಖೇವಜಿ, ಲಕ್ಷ್ಮಣ ಕ್ಷೀರಸಾಗರ ಅವರನ್ನು ಸತ್ಕರಿಸಲಾಯಿತು. ಲೇಖಕ ಮುಡಬಿ ಗುಂಡರಾವ ಬರೆದ ಸ್ವಾತಂತ್ರ್ಯ ಹೋರಾಟದಲ್ಲಿ ಸೇಡಂ ಮತ್ತು ಮುಧೋಳ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕವನ್ನು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಲೋಕಾರ್ಪಣೆಗೊಳಿಸಿದರು.

ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಸಂಕಲ್ಪ ವಿಧಿ ಬೋಧಿಸಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕ್ರಯ್ಯಾಸ್ವಾಮಿ ಇಮಡಾಪೂರ, ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕಮ್ಮ ಬಸವರಾಜ, ಕಸಾಪ ಅಧ್ಯಕ್ಷೆ ಸುಮಾ ಸುಮಾ ಚಿಮ್ಮನಚೋಡ್ಕರ, ಇಒ ಎಂ.ಕಾರ್ತಿಕ, ಭೀಮಣ್ಣ ಕುದುರಿ, ಸಂದೀಪಸಿಂಗ ಮರಗೋಡ, ನಾಗರೆಡ್ಡಿ ದೇಶಮುಖ, ಮುಖಂಡ ವಿಜಯಕುಮಾರ ಆಡಕಿ, ನಾಗರೆಡ್ಡಿ ಪಾಟೀಲ್, ಶ್ರೀಕಾಂತ ರೆಡ್ಡಿ, ವೆಂಕಟರಾವ ಮಿಸ್ಕಿನ, ರಾಘವೇಂದ್ರ ಕುಸುಮಾ ಸೇರಿ ಇನ್ನಿತರರು ಇದ್ದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಸ್ವಾಗತಿಸಿದರು. ಪತ್ರಕರ್ತ ಅವಿನಾಶ ಬೋರಂಚಿ ನಿರೂಪಿಸಿದರು. ವೈ.ಎಲ್. ಹಂಪಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.