ADVERTISEMENT

ಕಲಬುರಗಿಯಲ್ಲಿ ರಕ್ಷಾ ಬಂಧನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:52 IST
Last Updated 13 ಆಗಸ್ಟ್ 2022, 2:52 IST
ರಕ್ಷಾ ಬಂಧನದ ಅಂಗವಾಗಿ ಕಲಬುರಗಿಯ ನ್ಯೂ ಜೇವರ್ಗಿ ರಸ್ತೆಯ ಭಾಗ್ಯವಂತಿ ನಗರದ ಶಂಕರ ಜೋಶಿ ಅವರ ಮನೆಯಲ್ಲಿ ಶುಕ್ರವಾರ ಅಣ್ಣಂದಿರಿಗೆ ರಾಖಿ ಕಟ್ಟಿದ ಸಹೋದರಿಯರು
ರಕ್ಷಾ ಬಂಧನದ ಅಂಗವಾಗಿ ಕಲಬುರಗಿಯ ನ್ಯೂ ಜೇವರ್ಗಿ ರಸ್ತೆಯ ಭಾಗ್ಯವಂತಿ ನಗರದ ಶಂಕರ ಜೋಶಿ ಅವರ ಮನೆಯಲ್ಲಿ ಶುಕ್ರವಾರ ಅಣ್ಣಂದಿರಿಗೆ ರಾಖಿ ಕಟ್ಟಿದ ಸಹೋದರಿಯರು   

ಕಲಬುರಗಿ: ಸಹೋದರ, ಸಹೋದರಿಯರ ಮಧ್ಯೆ ಬಾಂಧವ್ಯ ಬೆಸೆಯುವುದಕ್ಕಾಗಿ ಆಚರಿಸಲಾಗುವ ರಾಖಿ ಹಬ್ಬವನ್ನು ನಗರದಲ್ಲಿ ಶುಕ್ರವಾರ ಆಚರಿಸಲಾಯಿತು.‌

ಬುಧವಾರದಿಂದಲೇ ನಗರದ ಅಂಗಡಿಗಳಲ್ಲಿ ತರಹೇವಾರಿ ರಾಖಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯರು, ಯುವತಿಯರು ವಿಧ ವಿಧದ ರಾಖಿಗಳನ್ನು ಖರೀದಿಸಿ ಅವುಗಳನ್ನು ತಮ್ಮ ಸಹೋದರರಿಗೆ ಕಟ್ಟಿದರು.

ಕೆಲವೆಡೆ ಹಿಂದೂ ಮಹಿಳೆಯರು ನೆರೆ ಹೊರೆಯ ಮುಸ್ಲಿಂ ಯುವಕರಿಗೆ ರಾಖಿಯನ್ನು ಕಟ್ಟುವ ಮೂಲಕ ಭಾವೈಕ್ಯ ಸಂದೇಶ ಸಾರಿದರು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ರಾಖಿ ಕಟ್ಟಿದರು. ಇದಕ್ಕೆ ಪ್ರತಿಯಾಗಿ ಚಾಕೊಲೇಟ್ ಹಾಗೂ ಹಣವನ್ನು ಉಡುಗೊರೆಯಾಗಿ ನೀಡಿದರು.

ADVERTISEMENT

ಅಂಚೆ ಹಾಗೂ ಕೊರಿಯರ್ ಮೂಲಕವೂ ತಮ್ಮ ಸಹೋದರರಿಗೆ ಮಹಿಳೆಯರು ರಾಖಿಗಳನ್ನು ಕಳಿಸಿಕೊಟ್ಟರು. ಸಹೋದರಿಯ ಮನೆಗಳಿಗೆ ಬಂದ ಸಹೋದರರು ರಾಖಿ ಕಟ್ಟಿಸಿಕೊಂಡು ಸಿಹಿಯೂಟ ಮಾಡಿದರು.

ಎರಡು ವರ್ಷಗಳಿಂದ ಕೊರೊನಾ ಪ್ರಯುಕ್ತ ರಾಖಿ ಹಬ್ಬ ಕಳೆಗುಂದಿತ್ತು. ಈ ಬಾರಿ ಜನರ ಓಡಾಟ, ವಾಣಿಜ್ಯ ವಹಿವಾಟಿಗೆ ಯಾವುದೇ ಧಕ್ಕೆ ಇಲ್ಲದ್ದರಿಂದ ಹಬ್ಬಗಳು ನಿರಾತಂಕವಾಗಿ ನಡೆಯುತ್ತಿವೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದಸ್ಯರು ವಿವಿಧೆಡೆ ಸಾಮೂಹಿಕ ರಾಖಿ ಕಟ್ಟುವ ಕಾರ್ಯಕ್ರಮ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.