
ಕಲಬುರಗಿ: ನಗರದ ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರಜತ ಮಹೋತ್ಸವದ ಅಂಗವಾಗಿ ನ.24ರಿಂದ ನ.30ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದರು.
‘ಗೋದುತಾಯಿ ನಗರದಲ್ಲಿ 2000ನೇ ಇಸ್ವಿಯ ವಿಜಯದಶಮಿ ಸಮಯದಲ್ಲಿ ಆರಂಭವಾಗಿದ್ದ ಆಶ್ರಮವು ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ. 2001ರಲ್ಲಿ ತಾಡತೆಗನೂರಿನಲ್ಲಿ ವಿವೇಕಾನಂದ ವಿದ್ಯಾಪೀಠ ವಸತಿ ಶಾಲೆ 70 ಮಕ್ಕಳೊಂದಿಗೆ ಶುರುವಾಗಿತ್ತು. ಅದು 25ನೇ ವರ್ಷಕ್ಕೆ ಕಾಲಿಟ್ಟಿದೆ. 1ರಿಂದ 10ನೇ ತರಗತಿ ತನಕ ಸದ್ಯ 300 ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ನಗರದ ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಜತ ಮಹೋತ್ಸವದ ಭಾಗವಾಗಿ ಚೆನ್ನೈನ ಭಾಸ್ಕರ ಪ್ರಕಾಶ ಆಶ್ರಮದ ಸಹಯೋಗದಲ್ಲಿ ಅಯುತ ಚಂಡಿಕಾ ಮಹಾಯಾಗ, ಅತಿರುದ್ರ ಮಹಾಯಾಗ ನಡೆಯಲಿದೆ. ನ.24ರಂದು ನದಿಯಿಂದ ಜಲಸಂಗ್ರಹಣೆ, ನ.25ರಂದು ಪೂರ್ವಭಾವಿ ಹಲವು ಹೋಮ ಜರುಗಲಿವೆ’ ಎಂದರು.
‘ನ.26, 27, 28ರಂದು ನಿತ್ಯ ಎರಡು ಸುತ್ತಿನ ಅಯುತ ಚಂಡಿಕಾ ಮಹಾಯಾಗ ಜರುಗಲಿದೆ. 29ರಂದು 7ನೇ ಸುತ್ತಿನ ಅಯುತ ಚಂಡಿಕಾ ಮಹಾಯಾಗ ಹಾಗೂ ಮಧ್ಯಾಹ್ನ ಪೂರ್ಣಾಹುತಿ ಜರುಗಲಿದೆ. 30ರಂದು ಅತಿರುದ್ರ ಮಹಾಯಾಗ ನಡೆಯಲಿದೆ’ ಎಂದು ವಿವರಿಸಿದರು.
‘ನ.26ರಿಂದ 29ರ ತನಕ ನಿತ್ಯ ಕನ್ಯಾ ಪೂಜೆ, ಭೈರವ ಪೂಜೆ ನಡೆಯಲಿದೆ. 25ರಂದು ಮಧ್ಯಾಹ್ನ 1 ಗಂಟೆಯಿಂದ ನಗರದ ಅನ್ನಪೂರ್ಣ ಕ್ರಾಸ್‌ನಿಂದ ದುರ್ಗಾದೇವಿ, ಶಾರದಾದೇವಿ ಮೂರ್ತಿಗಳ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ. 27ರಂದು ಕಲ್ಯಾಣಿ ಕಾಳಿ ದೇವಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದುರ್ಗಾಸಪ್ತಶತಿ ಅಭಿಯಾನದ ರೂವಾರಿ ರುದ್ರೇಶ ಆಚಾರ್ಯ, ಆರ್.ಶ್ರೀನಿವಾಸ ಮೂರ್ತಿ ಇದ್ದರು.
‘ಮಹಾಯಾಗಕ್ಕಾಗಿ ಯಾಗ ಶಾಲೆ ಸಜ್ಜುಗೊಳಿಸಲಾಗಿದೆ. ಪ್ರತಿ ಸುತ್ತಿನಲ್ಲಿ ತಲಾ 150 ಋತ್ವಿಜರು ಪಾಲ್ಗೊಳ್ಳಲಿದ್ದಾರೆ. ಮಹಾಯಾಗಕ್ಕೆ ಒಂದು ಟನ್ ತುಪ್ಪಬಳಕೆಯಾಗುತ್ತದೆ’ ಎಂದು ಮಾಹಿತಿ ನೀಡಿದರು. ‘ನ.27ರಂದು ಮಧ್ಯಾಹ್ನ 2ರಿಂದ ‘ಶಾಂಭವಿ ವಿಜಯ’ ತಾಳ ಮದ್ದಲೆ ಯಕ್ಷಗಾನ ನಡೆಯಲಿದೆ. ರಾತ್ರಿ ದುರ್ಗಾ ಸಪ್ತಶತಿ ತಂಡದಿಂದ ದಾಂಡಿಯಾ ಕಾರ್ಯಕ್ರಮ 28ರಂದು ಸಂಜೆ 6.30ರಿಂದ ‘ಲಲಿತಾರ್ಣವ’ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ತಮಿಳುನಾಡು ಆಂಧ್ರ ಪ್ರದೇಶದ ವಿವಿಧೆಡೆಯಿಂದ ನಿತ್ಯ ಎರಡು ಸಾವಿರಷ್ಟು ಜನರು ಪಾಲ್ಗೊಳ್ಳುವ ನಿರೀಕ್ಷೆಗಳಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.