ಕಲಬುರಗಿ: ‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಛಾಯಾಗ್ರಾಹಕರು ಹೋರಾಟ ನಡೆಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.
ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಛಾಯಾಗ್ರಾಹಕರ ಒಗ್ಗಟ್ಟು ಗಮನಿಸಿದರೆ ಖುಷಿಯಾಗುತ್ತದೆ. ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಿನೊಂದಿಗೆ ಹೋರಾಟವೂ ಮುಖ್ಯವಾಗುತ್ತದೆ. ಛಾಯಾಗ್ರಾಹಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಸಾಧ್ಯವಾದಷ್ಟು ಸಹಾಯ ಮಾಡುವೆ’ ಎಂದು ಹೇಳಿದರು.
‘ಮೊಬೈಲ್ ಬಂದ ಮೇಲೆ ಛಾಯಾಗ್ರಾಹಕರ ಬೇಡಿಕೆ ಕಡಿಮೆಯಾಗುತ್ತಿದೆ. ಆಧುನಿಕತೆಗೆ ತಕ್ಕಂತೆ ತಾಂತ್ರಿಕತೆ, ನೈಪುಣ್ಯಕ್ಕೆ ಒತ್ತು ಕೊಡಬೇಕು. ಕಲೆಗೆ ಬೆಲೆ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.
ಹಿರಿಯ ಛಾಯಾಗ್ರಾಹಕ ಮಹಮ್ಮದ್ ಅಯಾಜೊದ್ದೀನ್ ಪಟೇಲ್ ಮಾತನಾಡಿ, ‘ಛಾಯಾಗ್ರಾಹಕರಿಗೆ ಅವಕಾಶಗಳು ಸಿಗುವುದು ಕಡಿಮೆ. ಆದರೆ ಸಿಕ್ಕ ಅವಕಾಶದಲ್ಲೇ ಅವರು ಜಗತ್ತನ್ನು ಬದಲಾಯಿಸುವ ಶಕ್ತಿಯುಳ್ಳವರು. ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸುವುದರಲ್ಲಿ ಸಂಘಟನೆಯವರ ಶ್ರಮ ದೊಡ್ಡದು’ ಎಂದರು.
ಉದ್ಯಮಿ ಸತೀಶ ಗುತ್ತೇದಾರ, ಡಾ. ಅಜಯ್, ಎಂ.ಎನ್. ಎಸ್. ಶಾಸ್ತ್ರಿ, ವಿಜಯಕುಮಾರ್ ಪುರಾಣಿಕ್, ಪ್ರಭು ಪೂಜಾರಿ, ರಮೇಶ ಪಾಟೀಲ, ಸೋಮಶೇಖರ ಸಿಂಪಿ, ಶ್ರೀನಿವಾಸ ಜೋಶಿ, ಸಂಘದ ತಾಲ್ಲೂಕು ಘಟಕಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಾಗೇಂದ್ರ ಸಕ್ಕರಗಿ ಸ್ವಾಗತಿಸಿದರು. ಅನೀಶಾ ಕುಲಕರ್ಣಿ ನಿರೂಪಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ತೋಟದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಛಾಯಾಗ್ರಾಹಣ ಪ್ರಕ್ರಿಯೆ ಕಂಡುಹಿಡಿದ ಫ್ರಾನ್ಸ್‌ನ ಲೂಯಿಸ್ ಡಾಗೆರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು. ಇದೇ ವೇಳೆ 15 ಮಂದಿಗೆ ಕಲ್ಯಾಣ ಕರ್ನಾಟಕ ಛಾಯಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.