ಆಳಂದ: ತಾಲ್ಲೂಕಿನ ತಾಂಡಾವೊಂದರ ಬಾಲಕಿಗೆ ಹೆದರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ನರೋಣಾ ಪೋಲಿಸ್ ಠಾಣೆಯಲ್ಲಿ ಸೋಮವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಕಾಸ ಜಾಧವ ಅತ್ಯಾಚಾರ ಎಸಗಿದ್ದ ಆರೋಪಿ. ಸಂತ್ರಸ್ತೆ ಬಾಲಕಿಯು ಕಲಬುರಗಿ ನಗರದ ಖಾಸಗಿ ಪಿಯು ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ನಗರದಲ್ಲಿ ವಾಸವಾಗಿದ್ದ ವಿಕಾಸ, ಆಗಾಗ ತಾಂಡಾದಲ್ಲಿನ ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದನ್ನು. ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದನ್ನು ಎಂದು ಬಾಲಕಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಾಲಕಿ ಸಂಬಂಧಿಕರು ಯುವಕನಿಗೆ ಬುದ್ಧಿ ಹೇಳಿದ್ದರೂ ಅದಕ್ಕೆ ಕಿವಿಗೊಡಲಿಲ್ಲ. ಬಾಲಕಿಯು 2024ರ ಮೇ ತಿಂಗಳಲ್ಲಿ ಬೇಸಿಗೆ ರಜೆಗಾಗಿ ಮನೆಗೆ ಬಂದಿದ್ದಳು. ಆಗ, ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ವಿಕಾಸ, ಬೆದರಿಕೆ ಹಾಕಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಕೃತ್ಯದ ಬಗ್ಗೆ ಬಾಯಿ ಬಿಟ್ಟರೆ ಜೀವ ತೆಗೆಯುವುದಾಗಿ ಹೆದರಿಸಿ, ಹಲವು ಬಾರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿದ್ದಾರೆ.
ಯುವಕನ ವಿರುದ್ಧ ಕಲಂ 448, 376 (2) (ಎನ್), 506 ಮತ್ತು 4, 6 ಪೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.