ADVERTISEMENT

ಆಳಂದ | ಶಿವಲಿಂಗೇಶ್ವರ ರಥೋತ್ಸವ ಸಂಭ್ರಮ

ಪದ್ಮಶ್ರೀ ಪ್ರಶಸ್ತಿಯು ಜನರಿಗೆ ಸಂದ ಗೌರವ- ವಿಜಯಲಕ್ಷ್ಮಿ ದೇಶಮಾನೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:05 IST
Last Updated 13 ಮೇ 2025, 16:05 IST
ಮಾದನಹಿಪ್ಪರಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ರಥೋತ್ಸವವು ಸಂಭ್ರಮದಿಂದ ಜರುಗಿತು.
ಮಾದನಹಿಪ್ಪರಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ರಥೋತ್ಸವವು ಸಂಭ್ರಮದಿಂದ ಜರುಗಿತು.   

ಆಳಂದ: ‘ಪದ್ಮಶ್ರೀ ಪ್ರಶಸ್ತಿಯು ನಾಡಿನ ಜನೆರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯು ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಅರ್ಪಿಸುತ್ತೇನೆ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.

ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಶಿವಲಿಂಗೇಶ್ವರರ ಮಹಾರಥೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ‘ಧರ್ಮ,ಶಿಕ್ಷಣಮ ಸಮಾಜ ಸೇವಾ ಕಾರ್ಯಗಳ ಮುಖಾಂತರ ಮಾದನಹಿಪ್ಪರಗಿಯ ಶಿವಲಿಂಗೇಶ್ವರ ಮಠವೂ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಕೂಡ ಪ್ರಸಿದ್ಧವಾಗಿದೆ. ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ 12ನೇ ಶತಮಾನದ ಚೆನ್ನಬಸವಣ್ಣನವರಂತೆ ಚಿಕ್ಕ ವಯಸ್ಸಿನಲ್ಲಿ ಕೀರ್ತಿ ಹೊಂದಿದ್ದಾರೆ. ಮಠಕ್ಕೆ ಬರುವ ಭಕ್ತರನ್ನು ಅತ್ಯಂತ ಕಾರುಣ್ಯದಿಂದ ಕಾಣುವ ಸ್ವಾಮೀಜಿ’ ಎಂದು ಹೇಳಿದರು.

ADVERTISEMENT

ಯಡ್ರಾಮಿ ಸಿದ್ಧಲಿಂಗ ಸ್ವಾಮೀಜಿ, ಮೈಂದರ್ಗಿಯ ಮಹಾಂತ ಸ್ವಾಮೀಜಿ, ಫಕೀರಾನಂದ ಸಾಧು ಮಹಾರಾಜರು, ಶಿವದೇವಿ ಮಾತಾಜಿ ಹಾಗೂ ಅನೇಕ ಮಠಾಧೀಶರು ಭಾಗವಹಿಸಿದ್ದರು.

ರಥೋತ್ಸವ ಸಂಭ್ರಮ: ಶಿವಲಿಂಗೇಶ್ವರ ವಿರಕ್ತಮಠದ ಆವರಣದಲ್ಲಿ ಸಂಜೆ ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೋಳಿಸುವ ಮಹಾರಥಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ನಂತರ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಆಗಮಿಸಿ ರಥಕ್ಕೆ ಪೂಜೆ ಸಲ್ಲಿಸಿದರು. ಪದ್ಮಶ್ರೀ ಪುರಸ್ಕೃತ ವಿಜಯಲಕ್ಷ್ಮಿ ದೇಶಮಾನೆ ಅವರು ಶಿವಲಿಂಗೇಶ್ವರ ಮಠದ ಧ್ವಜ ಹಾರಾಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಾವಿರಾರೂ ಸಂಖ್ಯೆಯಲ್ಲಿ ನೆರೆದ ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದರು. ಯುವಕರು ಉತ್ಸಾಹ, ಸಡಗರದಿಂದ ಶಿವಲಿಂಗೇಶ್ವರ ಮಹಾರಾಜ ಕೀ ಜೈ ಘೋಷಣೆ ಕೂಗಿದರು. ಸುತ್ತಲು ಸೇರಿದ ಭಕ್ತರು ಉತ್ತತ್ತಿ, ಬಾಳೆಹಣ್ಣು ಮತ್ತಿತರ ಫಲಪುಷ್ಪಗಳು ರಥದ ಮೇಲೆ ಸಮರ್ಪಿಸಿ ಧನ್ಯತೆ ಮೆರೆದರು.

ಆಳಂದ, ಅಕ್ಕಲಕೋಟ ತಾಲ್ಲೂಕಿನ ವಿವಿಧ ಗ್ರಾಮದ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೊದಲು ಗ್ರಾಮದ ಮುಖ್ಯಬೀದಿಗಳಲ್ಲಿ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ಸಾಗಿತು. ವಿವಿಧ ಕಲಾಮೇಳಗಳ ಪ್ರದರ್ಶನ, ಭಜನೆ, ಪುರವಂತರ ಕುಣಿತವು ಮೆರವಣಿಗೆಯಲ್ಲಿ ಗಮನ ಸೆಳೆದವು.

ಮಾದನಹಿಪ್ಪರಗಿ ಗ್ರಾಮದಲ್ಲಿನ ಶ್ರೀ ಶಿವಲಿಂಗೇಶ್ವರ ರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತೆ  ವಿಜಯಲಲಕ್ಷ್ಮಿ ದೇಶಮಾನೆ ಧ್ವಜ ಬೀಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅಭಿನವ ಶಿವಲಿಂಗ ಸ್ವಾಮೀಜಿ ಸಿದ್ಧಲಿಂಗ ಸ್ವಾಮೀಜಿ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.