ADVERTISEMENT

ಕಲಬುರಗಿ: ಕಾರ್ಡ್‌ಗಾಗಿ ಕಾಯುತ್ತಿರುವ 22,527 ಮಂದಿ

2023ರ ಅಕ್ಟೋಬರ್‌ ಬಳಿಕ ಹೊಸ ಪಡಿತರ ಚೀಟಿ ವಿತರಣೆ ಸ್ಥಗಿತ

ಮಲ್ಲಿಕಾರ್ಜುನ ನಾಲವಾರ
Published 7 ಡಿಸೆಂಬರ್ 2024, 4:24 IST
Last Updated 7 ಡಿಸೆಂಬರ್ 2024, 4:24 IST
ಬಿಪಿಎಲ್‌ ಕಾರ್ಡ್‌ (ಸಂಗ್ರಹ ಚಿತ್ರ)
ಬಿಪಿಎಲ್‌ ಕಾರ್ಡ್‌ (ಸಂಗ್ರಹ ಚಿತ್ರ)   

ಕಲಬುರಗಿ: ಜಿಲ್ಲೆಯಲ್ಲಿ ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವವರು), ಎಪಿಎಲ್ (ಬಡತನ ರೇಖೆಗಿಂತ ಮೇಲಿರುವವರು) ಹಾಗೂ ಅಂತ್ಯೋದಯ ಅನ್ನ ಯೋಜನೆಯ (ಎಎವೈ) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ 22,527 ಅರ್ಜಿದಾರರು 13 ತಿಂಗಳಿಂದ ವಿಲೇವಾರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ರಾಜ್ಯ ಸರ್ಕಾರವು ಕಳೆದ ವರ್ಷ ‘ಗೃಹಲಕ್ಷ್ಮಿ’ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಇದರಿಂದ ಕುಟುಂಬದ ಯಜಮಾನಿಗೆ ತಿಂಗಳಿಗೆ ₹ 2 ಸಾವಿರ ಲಭಿಸುತ್ತಿದೆ. ಇದರ ಜತೆಗೆ ಬಿಪಿಎಲ್ ಕಾರ್ಡ್‌ ಹೊಂದಿರುವ ಪ್ರತಿ ಸದಸ್ಯರಿಗೆ ತಿಂಗಳಿಗೆ ₹170 ಸಿಗುತ್ತಿದೆ. ಹೀಗಾಗಿ, ಇವುಗಳ ಪ್ರಯೋಜನೆ ಪಡೆಯಲು ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರೂ ಹೆಚ್ಚಾದರು.

2021ರ ನವೆಂಬರ್ ಬಳಿಕ ಜಿಲ್ಲೆಯಲ್ಲಿ ಒಟ್ಟು 89,737 ಮಂದಿ ಪಡಿತರ ಕಾರ್ಡ್‌ಗಳಿಗಾಗಿ ಅರ್ಜಿ ಹಾಕಿದ್ದಾರೆ. 3,080 ಮಂದಿ ಅರ್ಜಿಗಳನ್ನು ಹಿಂಪಡೆದಿದ್ದು, 86,657 ಅರ್ಜಿಗಳು ಸಲ್ಲಿಕೆಯಾದವು. ಇಲಾಖೆಯ ಆಹಾರ ಇನ್‌ಸ್ಟೆಕ್ಟರ್‌ಗಳು 69,442 ಅರ್ಜಿದಾರರ ಮನೆಗಳಿಗೆ ತೆರಳಿ ಸ್ಥಳ ಪರೀಕ್ಷೆ ಮಾಡಿ, ಅವರ ಅರ್ಹತೆಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ 52,246 ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದು, ಇನ್ನುಳಿದ 11,884 ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಒಟ್ಟು 64,130 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಇದರಲ್ಲಿನ ಬಹುತೇಕ ವಿಲೇವಾರಿ ಪ್ರಕ್ರಿಯೆ ನಡೆದಿದ್ದು, 2023ರ ಅಕ್ಟೋಬರ್ ಪೂರ್ವದಲ್ಲಿ.

ADVERTISEMENT

ಹನ್ನೊಂದು ತಾಲ್ಲೂಕುಗಳಿಂದ ಒಟ್ಟು 22,527 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಆದರೆ, ಅರ್ಜಿಗಳ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಆದೇಶ ಬರುತ್ತಿಲ್ಲ. ಮತ್ತೊಂದು ಕಡೆ, ಪ್ರತ್ಯೇಕ ಕಾರ್ಡ್‌ಗಳನ್ನು ಮಾಡಿಸಿಕೊಂಡರೆ ತಮಗೂ ‘ಗೃಹಲಕ್ಷ್ಮಿ’ಯ ಹಣ ಬರುತ್ತದೆ ಎಂದು ಈಗಿರುವ ಕಾರ್ಡ್‌ಗಳಲ್ಲಿನ ತಮ್ಮ ಹೆಸರು ತೆಗೆದು ಹಾಕಿ, ಹೊಸದಾಗಿ ಅರ್ಜಿ ಹಾಕಿದವರೂ ಕಾಯುತ್ತಿದ್ದಾರೆ. ವಿಲೇವಾರಿಯ ಭಾಗ್ಯ ಇನ್ನೂ ಸಿಗುತ್ತಿಲ್ಲ.

ಒಂದು ಬಾರಿ 7,400 ಕಾರ್ಡ್ ವಿಲೇವಾರಿ: ರಾಜ್ಯ ಸರ್ಕಾರವು 2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮಾತ್ರ ಅರ್ಜಿಗಳ ವಿಲೇವಾರಿಗೆ ಅವಕಾಶ ನೀಡಿತ್ತು. ಮೃತಪಟ್ಟವರ ಸುಮಾರು 7,400 ಕಾರ್ಡ್‌ಗಳನ್ನು ರದ್ದುಪಡಿಸಿ, ಅವರ ಜಾಗದಲ್ಲಿ ಅಷ್ಟೇ ಸಂಖ್ಯೆಯ ಬೇರೆಯವರಿಗೆ ಕಾರ್ಡ್‌ಗಳನ್ನು ವಿಲೇವಾರಿ ಮಾಡಲಾಗಿತ್ತು. ಇದರಿಂದ ಸುಮಾರು 23 ಸಾವಿರ ಇದ್ದ ಅರ್ಜಿಗಳ ಸಂಖ್ಯೆ 16 ಸಾವಿರಕ್ಕೆ ಇಳಿದಿತ್ತು. ಈಗ ಅರ್ಜಿಗಳ ಸಂಖ್ಯೆ ಮತ್ತೆ 22 ಸಾವಿರ ಗಡಿ ದಾಟಿದೆ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯ ಸರ್ಕಾರವು ಹೊಸ ಅರ್ಜಿಗಳ ವಿಲೇವಾರಿಗೆ ಅವಕಾಶ ನೀಡಿಲ್ಲ. ಆದರೆ ತುರ್ತು ಆರೋಗ್ಯ ಸೇವೆಗಾಗಿ ಪಡಿತರ ಚೀಟಿಗಳಿಗೆ ಅನುಮತಿ ನೀಡಲು ಅವಕಾಶ ಕಲ್ಪಿಸಿದೆ. ನಿತ್ಯ ಒಂದಲ್ಲಾ ಒಂದು ಅರ್ಜಿ ಬರುತ್ತಿವೆ
ಭೀಮರಾಯ ಕಲ್ಲೂರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.