ಕಲಬುರಗಿ: ‘ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದುಹಾಕಬೇಕು ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಈ ಪದಗಳನ್ನು ತೆಗೆದು ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಚಕ್ರಾಧಿಪತ್ಯ ಪದಗಳನ್ನು ಸೇರಿಸಬೇಕೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಪ್ರಶ್ನಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತ್ಯತೀತ ಭಾರತದ ಸಂಸ್ಕೃತಿಯಲ್ಲ ಹಾಗೂ ಸಮಾಜವಾದ ನಮಗೆ ಅಗತ್ಯವಿಲ್ಲ’ ಎಂದು ಕೇಂದ್ರ ಸಚಿವ ಶಿವರಾಜಸಿಂಗ್ ಚವ್ಹಾಣ್ ಅವರು ಕೂಡ ಹೇಳಿದ್ದರು. ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದವರು ಸಂವಿಧಾನಕ್ಕೆ ಪರ್ಯಾಯವಾಗಿ ಯಾವ ಸಿದ್ಧಾಂತ ಅಳವಡಿಸಿಕೊಳ್ಳುತ್ತೀರಿ? ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ ಎಂದು ಧೈರ್ಯವಾಗಿ ಹೇಳುವಿರಾ? ಸಂವಿಧಾನ ಮುಟ್ಟಿದರೆ ರಕ್ತಕ್ರಾಂತಿಯಾಗುತ್ತದೆ. ಈ ದೇಶದ ಮೂಲ ನಿವಾಸಿಗಳು ಸಂವಿಧಾನ ಉಳಿಸಿಕೊಳ್ಳಲು ಯಾವುದೇ ತ್ಯಾಗ, ಬಲಿದಾನಕ್ಕೂ ಸಿದ್ಧರಿದ್ದೇವೆ’ ಎಂದರು.
‘ಭಾರತದ ಮೂಲ ಸಂವಿಧಾನದ ಆರ್ಟಿಕಲ್ 25, 28, 38, 48 ಪ್ರತಿಪಾದಿಸುವುದು ‘ಜಾತ್ಯತೀತ’ ಮತ್ತು ‘ಸಮಾಜವಾದ’ ಅಲ್ಲವೇ? ಸುಪ್ರೀಂ ಕೋರ್ಟ್‌ನಲ್ಲಿ 2024ರ ನವೆಂಬರ್‌ನಲ್ಲಿ ಈ ಪದಗಳ ಸೇರ್ಪಡೆಯನ್ನು ಆಕ್ಷೇಪಿಸಿ ದಾಖಲಾಗಿದ್ದ ದಾವೆಗಳೆಲ್ಲ ತಿರಸ್ಕರಿಸಲಾಗಿದೆ. ಇನ್ನು 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ 13 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಜಾತ್ಯತೀತ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿದೆ. 1976ರಲ್ಲಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ ಮೂಲಕ ಪೀಠಿಕೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ಸೇರಿಸಿದ್ದು ಹೊಸಬಾಳೆ ಅವರಿಗೆ ಗೊತ್ತಿಲ್ಲವೇ? ಆರ್‌ಎಸ್‌ಎಸ್‌ಗೆ ಸಂವಿಧಾನವೇ ಅಪತ್ಯ’ ಎಂದು ಟೀಕಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ಕ್ರಾಂತಿ, ಮಹೇಶ ಕೋಕಿಲೆ, ಮಲ್ಲಿಕಾರ್ಜುನ ಖನ್ನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.