ADVERTISEMENT

ಬಂಡಾಯ ಸಾಹಿತಿ ಸಂಗಣ್ಣ ಹೊಸಮನಿ ನಿಧನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:01 IST
Last Updated 11 ಆಗಸ್ಟ್ 2020, 4:01 IST
ಸಂಗಣ್ಣ
ಸಂಗಣ್ಣ   

ವಾಡಿ: ಎಸಿಸಿ ಸಿಮೆಂಟ್ ಕಂಪನಿಯ ನಿವೃತ್ತ ನೌಕರ, ಹಿರಿಯ ಬಂಡಾಯ ಸಾಹಿತಿ ಸಂಗಣ್ಣ ಹೊಸಮನಿ (75) ಜೇವರ್ಗಿ ತಾಲ್ಲೂಕಿನ ಕುಕನೂರು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.

ಕುಕನೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಅವರಿಗೆ ಪತ್ನಿ, ಪುತ್ರ ಹಾಗೂ ಮೊಮ್ಮಕ್ಕಳು ಇದ್ದಾರೆ.

ಸ್ಥಳೀಯ ಎಸಿಸಿ ಸಿಮೆಂಟ್ ಕಂಪನಿಯ ಕಾರ್ಮಿಕನಾಗಿ ದುಡಿಮೆ ಪ್ರಾರಂಭಿಸಿದ ಸಂಗಣ್ಣ ಹೊಸಮನಿ ಅವರು ತಮ್ಮ ಕಾರ್ಮಿಕ ಪರ ನಿಲುವುಗಳಿಂದ ಕಾರ್ಮಿಕರ ಮನ ಗೆದ್ದು ನಾಯಕರಾಗಿ ಹೊರಹೊಮ್ಮಿದರು. ಕಾರ್ಮಿಕರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡಿದ್ದನ್ನು ಈಗಲೂ ಕೆಲವು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ADVERTISEMENT

ಹಿರಿಯ ಕಮ್ಯುನಿಸ್ಟ್‌ ನಾಯಕ ಶ್ರೀನಿವಾಸ ಗುಡಿ ಅವರ ಗರಡಿಯಲ್ಲಿ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಾರ್ಲ್ ಮಾರ್ಕ್ಸ್ ಅವರ ಕನಸಿಗೆ ಪೂರಕವಾಗಿ ಸಾಹಿತ್ಯ ಕೃಷಿ ನಡೆಸಿದ ಇವರು ಸಿಪಿಐ ಪಕ್ಷದಿಂದ ಪ್ರಕಟವಾಗುವ ಕೆಂಬಾವುಟ ಪತ್ರಿಕೆಯಲ್ಲಿ ಹಲವು ಕವನ ಮತ್ತು ಲೇಖನಗಳನ್ನು ಬರೆದು ಜನಮನ್ನಣೆ ಗಳಿಸಿದರು.

ಫೆಬ್ರುವರಿಯಲ್ಲಿ ಕಲಬುರ್ಗಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಬಂಡಾಯ ಕವನ ವಾಚಿಸಿದ್ದರು.

ತುರ್ತು ಪರಿಸ್ಥಿತಿ ಖಂಡಿಸಿ ರಕ್ತದಾನ, ಸಿಡಿಲಿನ ಸೇಡು, ಅನಕ್ಷರತೆ ಅಳಿಯಲಿ ನಾಟಕಗಳನ್ನು ಬರೆದು ಪ್ರದರ್ಶನ ನೀಡಿದ್ದಾರೆ. 'ಕ್ರಾಂತಿಯ ಕಹಳೆ' ಹಾಗೂ 'ಕ್ರಾಂತಿಯ ಕಿಡಿ' ಕವನ ಸಂಕಲನಗಳು ಬರೆದು ಪ್ರಕಟಿಸಿದ್ದರೆ, 'ಕ್ರಾಂತಿಯ ಅಲೆ' ಹಾಗೂ 'ಕ್ರಾಂತಿಯ ಕಿಚ್ಚು' ಕವನ ಸಂಕಲನಗಳು ಪ್ರಕಟಗೊಳ್ಳದೇ ಹಾಗೇ ಉಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.