ADVERTISEMENT

ಕಲಬುರ್ಗಿ: ತೊಗರಿ ಖರೀದಿ ಮಿತಿ ಹೆಚ್ಚಿಸಲು ಒತ್ತಾಯ

ಕರ್ನಾಟಕ ‍‍ಪ್ರಾಂತ ರೈತ ಸಂಘದಿಂದ ಸಂಸದರ ಮನೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 10:10 IST
Last Updated 6 ಜನವರಿ 2020, 10:10 IST
ರೈತರಿಂದ ಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ವಿಧಿಸಿರುವ ಮಿತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಂಸದ ಡಾ.ಉಮೇಶ ಜಾಧವ್ ಮನೆ ಎದುರು ಪ್ರತಿಭಟನೆ ನಡೆಸಿದರು
ರೈತರಿಂದ ಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ವಿಧಿಸಿರುವ ಮಿತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಂಸದ ಡಾ.ಉಮೇಶ ಜಾಧವ್ ಮನೆ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಪ್ರತಿಯೊಬ್ಬ ರೈತರಿಂದ ಬೆಂಬಲ ಬೆಲೆಯಡಿ 10 ಕ್ವಿಂಟಲ್‌ ಮಾತ್ರ ತೊಗರಿ ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕ್ರಮವನ್ನು ಹಿಂದಕ್ಕೆ ಪಡೆದು ಹೆಚ್ಚಿನ ತೊಗರಿ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸಂಸದ ಡಾ.ಉಮೇಶ ಜಾಧವ್ ಮನೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ 11 ಲಕ್ಷ ಹೆಕ್ಟೇರ್‌ನಲ್ಲಿ 11 ದಶ ಲಕ್ಷ ಟನ್ ತೊಗರಿ ಉತ್ಪಾದಿಸುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ 10.70 ದಶ ಲಕ್ಷ ಟನ್ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈಗಾಗಲೇ ಕೇಂದ್ರ ಸರ್ಕಾರವು 1.85 ಲಕ್ಷ ಟನ್ ಮಾತ್ರ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. 5.5. ಲಕ್ಷ ಟನ್ ಖರೀದಿಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತೊಗರಿಗೆ ಕೇಂದ್ರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯ ಜೊತೆಗೆ ರಾಜ್ಯ ಸರ್ಕಾರ ₹ 300 ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ, ಎಂ.ಎಸ್.ಸ್ವಾಮಿನಾಥನ್ ವರದಿ ಪ್ರಕಾರ ಇದು ರೈತರ ಕೃಷಿ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಇಲ್ಲ. ಆದ್ದರಿಂದ ಈ ಪ್ರೋತ್ಸಾಹಧನವನ್ನು ₹ 1 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿದೇಶದಿಂದ ಬೇಳೆ ಕಾಳುಗಳ ಆಮದು ಮಾಡಿಕೊಳ್ಳುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಬೆಲೆ ಸ್ಥಿರೀಕರಣಗೊಳಿಸಲು ಸಾಧ್ಯವಾಗಿಲ್ಲ. ಸಣ್ಣ, ಅತೀ ಸಣ್ಣ ರೈತರು ಎಪಿಎಂಸಿಯಲ್ಲಿ ಅತಿ ಕಡಿಮೆ ಬೆಲೆಗೆ ತೊಗರಿ ಮಾರುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಗೆ ತೊಗರಿ, ಕಡಲೆ, ಹೆಸರು ಮತ್ತು ಉದ್ದು ಮಾರುಕಟ್ಟೆಗೆ ಬರುತ್ತಿಲ್ಲ. ತೊಗರಿ ಬೇಳೆ ಉದ್ಯಮಿಗಳು ಕೂಡಾ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇದಕ್ಕೆಲ್ಲ ಕಾರಣ ವಿದೇಶದಿಂದ ಬೇಳೆಕಾಳುಗಳ ಆಮದು ಮಾಡಿಕೊಳ್ಳುತ್ತಿರುವುದಾಗಿದೆ. ಬೇಳೆ ಕಾಳುಗಳ ಆಮದು ಡಬ್ಲುಟಿಒ ಒಪ್ಪಂದದ ಪ್ರಕಾರ ತಡೆಯಲು ಸಾಧ್ಯವಿಲ್ಲ. ಒಪ್ಪಂದದಲ್ಲಿ ಬೇಳೆ ಕಾಳುಗಳ ಮೇಲೆ ಶೇ 30ರಷ್ಟು ಆಮದು ಶುಲ್ಕ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಸುಧಾಮ ಧನ್ನಿ, ಶಾಂತಪ್ಪ ಪಾಟೀಲ, ಪಾಂಡುರಂಗ ಮಾವಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.