ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಎಸ್.ಎಂ.ಪಂಡಿತ ರಂಗಮಂದಿರ ಇದೀಗ ನವೀಕರಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.
ಸಾಹಿತ್ಯಾಸಕ್ತರಿಗೆ ಹಾಗೂ ಸಂಗೀತ ಪ್ರೇಮಿಗಳ ನೆಚ್ಚಿನ ತಾಣವಾಗಿದ್ದ ಈ ರಂಗಮಂದಿರ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖ ವೇದಿಕೆಯಾಗಿದೆ.
2009ರಲ್ಲಿ ನಿರ್ಮಾಣಗೊಂಡಿದ್ದ ಈ ರಂಗಮಂದಿರ ನೈಸರ್ಗಿಕವಾಗಿ ಕಾಲಕ್ರಮೇಣ ದುರಸ್ತಿಗೆ ಕಾದಿತ್ತು. ಸುಸಜ್ಜಿತ ರಂಗಮಂದಿರ ಮಾಡುವ ಕನಸಿನೊಂದಿಗೆ ನಿರ್ಣಯ ಕೈಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವಿಶೇಷ ಆಸಕ್ತಿ ವಹಿಸಿ ನವೀಕರಣಕ್ಕೆ 2025ರ ಜನವರಿ ಕೊನೆಯ ವಾರದಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಆರು ತಿಂಗಳಲ್ಲಿ ರಂಗಮಂದಿರ ನವವಧುವಿನಂತೆ ಕಂಗೊಳಿಸುತ್ತಿದೆ.
ರಂಗ ಮಂದಿರ ನವೀಕರಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಮ್ಯಾಕ್ರೋ ಯೋಜನೆಯಡಿಯಲ್ಲಿ ₹4.80 ಕೋಟಿ ಅನುದಾನ ಒದಗಿಸಲಾಗಿತ್ತು. ಆ ಅನುದಾನದಲ್ಲಿ ನಿರ್ಮಿತಿ ಕೇಂದ್ರವು ರಂಗಮಂದಿರವನ್ನು ನವೀಕರಿಸಿದೆ.
ಏನೆಲ್ಲ ನವೀಕರಣ?: ರಂಗಮಂದಿರದ ಒಳಗಿನ ನೆಲಮಹಡಿಯಲ್ಲಿ 552 ಆಸನಗಳು ಹಾಗೂ ಮೊದಲ ಮಹಡಿಯಲ್ಲಿ 303 ಆಸನಗಳನ್ನು ಸೇರಿಸಿ ಒಟ್ಟು 855 ಆಸನಗಳನ್ನು ಹೊಂದಿದೆ. ಈ ಎಲ್ಲ ಆಸನಗಳನ್ನು ಬದಲಾಯಿಸಿ ನೂತನ ಮಾದರಿಯ ಪುಷ್‌ಬ್ಯಾಕ್ ಗುಣಮಟ್ಟದ ಆಸನಗಳನ್ನು ಅಳವಡಿಸಲಾಗಿದೆ. ಪ್ರತಿ ಆಸನಗಳಿಗೆ ನೀರಿನ ಬಾಟಲ್ ಇಡುವ ಸೌಲಭ್ಯವೂ ಇದೆ.
ರಂಗಮಂದಿರದ ಒಳ ಹಾಗೂ ಹೊರಭಾಗಕ್ಕೆ ಕಣ್ಣಿಗೆ ಮುದನೀಡುವ ವಿವಿಧ ಬಗೆಯ ಬಣ್ಣಗಳನ್ನು ಬಳಿಯುವ ಮೂಲಕ ಹೊಸಸ್ಪರ್ಶ ನೀಡಲಾಗಿದೆ. ರಂಗಮಂದಿರದ ವೇದಿಕೆಯಲ್ಲಿ ಜಗಮಗಿಸುವ ಬಣ್ಣಬಣ್ಣದ ಆಲಂಕಾರಿಕ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ಹೊಂದಿಕೊಳ್ಳುವಂಥ ಉತ್ತಮ ಹಾಗೂ ಬೆಲೆಬಾಳುವ ಪರದೆಗಳನ್ನು ಅಳವಡಿಸಲಾಗಿದೆ.
ರಂಗಮಂದಿರ ಇಡೀ ಲೈಟಿಂಗ್ ವ್ಯವಸ್ಥೆಯನ್ನು ಹೊಸದಾಗಿ ಎಲೆಕ್ಟ್ರಿಕಲ್ ವೈರಿಂಗ್ ಮಾಡಲಾಗಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ದೋಷ ಕಾಣಿಸದಂತೆ ಸಜ್ಜುಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜನರೇಟರ್ ಬಳಕೆ ಸೌಲಭ್ಯವನ್ನೂ ಒದಗಿಸಲಾಗಿದೆ.
ರಂಗಮಂದಿರಕ್ಕೆ ಅನುಕೂಲವಾಗುವಂಥ ಹಾಗೂ ಪ್ರತಿಧ್ವನಿಯಾಗದಂಥ ಅತ್ಯಾಧುನಿಕ ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ರಂಗಮಂದಿರದ ವೇದಿಕೆಯಲ್ಲಿನ ಧ್ವನಿ ರಂಗಮಂದಿರದ ಎಲ್ಲ ಕಡೆಯ ಪ್ರೇಕ್ಷಕರ ಕಿವಿಗೆ ಇಂಪು ನೀಡುವಂಥ ವ್ಯವಸ್ಥೆ ಹೊಸ ಸೌಂಡ್ ಸಿಸ್ಟಂ ಒಳಗೊಂಡಿದೆ.
ರಂಗಮಂದಿರದಲ್ಲಿದ್ದ ಹವಾನಿಯಂತ್ರಿತ ಯಂತ್ರಗಳನ್ನು ಮತ್ತೊಮ್ಮೆ ಅಗತ್ಯ ರಿಪೇರಿ ಮಾಡಲಾಗಿದೆ. ರಂಗಮಂದಿರದಲ್ಲಿ ಹಿಂದೆ ಹಾಕಲಾಗಿದ್ದ ಟೈಲ್ಸ್‌ಗಳನ್ನು ತೆಗೆದು ಹೊಸ ಬಗೆಯ ಟೈಲ್ಸ್, ಗ್ರಾನೈಟ್ ಅಳವಡಿಸಿ ಆಕರ್ಷಕಗೊಳಿಸಲಾಗಿದೆ.
ಶೌಚಾಲಯ: ರಂಗಮಂದಿರದಲ್ಲಿ ಪುರುಷರಿಗಾಗಿ 4 ಹಾಗೂ ಮಹಿಳೆಯರಿಗಾಗಿ 4 ಸೇರಿದಂತೆ ಒಟ್ಟು 8 ಶೌಚಾಲಯಗಳಿದ್ದು, ಅವುಗಳನ್ನು ನವೀಕರಿಸಲಾಗಿದೆ. ರಂಗಮಂದಿರಕ್ಕೆ ಕಾರ್ಯಕ್ರಮ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಎಸ್.ಎಂ.ಪಂಡಿತ ರಂಗಮಂದಿರ ಸುಸಜ್ಜಿತ ರಂಗಮಂದಿರವನ್ನಾಗಿಸುವುದು ನನ್ನ ಕನಸಾಗಿತ್ತು. ಸಾಹಿತ್ಯಾಸಕ್ತರ ಮನತಣಿಸಲು ಈಗಿನ ಅಗತ್ಯಕ್ಕೆ ತಕ್ಕಂತೆ ರಂಗಮಂದಿರ ನವೀಕರಣಗೊಳಿಸಲಾಗಿದೆ. ಶೀಘ್ರವೇ ಆರಂಭಿಸಲಾಗುವುದುಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಈ ರಂಗಮಂದಿರವು ಕಲಬುರಗಿ ನಾಗರಿಕರ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಲಿದೆಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.