ADVERTISEMENT

ಶಹಾಬಾದ್: ರೇಣುಕಾ ಯಲ್ಲಮ್ಮ ಮೂರ್ತಿ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 7:29 IST
Last Updated 28 ಅಕ್ಟೋಬರ್ 2025, 7:29 IST
ಶಹಾಬಾದ ನಗರದ ಇಂಜನ್ ಫೈಲ್ ಬಡಾವಣೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶ್ರೀರೇಣುಕಾ ಎಲ್ಲಮ್ಮಾ ದೇವಿ ಮೂರ್ತಿ, ದೇವಸ್ಥಾನದ ಕಳಸವನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು
ಶಹಾಬಾದ ನಗರದ ಇಂಜನ್ ಫೈಲ್ ಬಡಾವಣೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶ್ರೀರೇಣುಕಾ ಎಲ್ಲಮ್ಮಾ ದೇವಿ ಮೂರ್ತಿ, ದೇವಸ್ಥಾನದ ಕಳಸವನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು   

ಶಹಾಬಾದ್: ನಗರದ ಇಂಜನ್ ಫೈಲ್ ಬಡಾವಣೆಯಲ್ಲಿ ಜೀರ್ಣೋದ್ದಾರಗೊಂಡಿರುವ ರೇಣುಕಾ ಯಲ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮಹಿಳೆಯರ ಪೂರ್ಣ ಕುಂಭ ಸ್ವಾಗತ, ಕಲಾ ತಂಡಗಳೊಂದಿಗೆ ಸೋಮವಾರ ನಗರದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ನಿಂಬಾಳ್ಕರ ಕುಟುಂಬದ ಕುಲದೇವತೆಯಾಗಿರುವ ಕೊತ್ಲಾಪುರ ರೇಣುಕಾ ಯಲ್ಲಮ್ಮ ದೇವಿಯ ಜೀರ್ಣಾವಸ್ಥೆಯ ದೇವಸ್ಥಾನವನ್ನು ಸಂಪೂರ್ಣ ಶಿಲಾ ದೇಗುಲ ನಿರ್ಮಿಸಲಾಗಿದೆ.

ಅ.27 ರಿಂದ 29 ವರೆಗೆ ಕೇರಳದ ತ್ರಿಶೂರಿನ ರಾಮದಾಸ ನಂಬೂದರಿ ಅವರ ವೈದಿಕರ ತಂಡದಿಂದ ದೇವಿಯ ಮೂರ್ತಿ ಪ್ರತಿಷ್ಠಾಪನೆಯ ವಿಧಿವಿಧಾನಗಳ ನಡೆಯಲಿದ್ದು, ಪ್ರಯುಕ್ತ ಸೋಮವಾರ ಬೆಳಗ್ಗೆ ಶ್ರೀಜಗದಂಬಾ ದೇವಿ ಮಂದಿರದಿಂದ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ದೇವಿಯ ಮೂರ್ತಿ, ದೇವಸ್ಥಾನದ ಕಳಸವನ್ನು ದೇವಸ್ಥಾನಕ್ಕೆ ತರಲಾಯಿತು.

ADVERTISEMENT

ದೇವಿಯ ಮೂರ್ತಿಯನ್ನು ತೆರೆದ ವಾಹನದಲ್ಲಿ ಹೂವಿನಿಂದ ನಿರ್ಮಿಸಿದ ಐದು ಹೆಡೆಯ ಹಾವಿನ ವೇದಿಕೆಯ ಮೇಲೆ ದೇವಿಯ ಕೃಷ್ಣಶಿಲೆ ಮೂರ್ತಿಯನ್ನು ಇಡಲಾಯಿತು. 501 ಜನ ಮುತೈದೆಯರು ಪೂರ್ಣ ಕುಂಭದೊಂದಿಗೆ, 251 ಜನ ಮುತೈದೆಯರು ಆರತಿ ಕಳಸದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ತಾಂಡೂರಿನ ಯಲ್ಲಮ್ಮ ದೇವಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಂಗಳೂರಿನಿಂದ ಆಗಮಿಸಿದ್ದ ಚಂಡಿ ಮದ್ದಲೆ, ನಾದಸ್ವರ, ಲೇಜಿಮ್, ಮಹಿಳೆಯರಿಂದ ಡೊಳ್ಳಿನ ಕುಣಿತ, ತಮಟೆ ವಾಧ್ಯ, ವೀರಗಾಸೆ ನೃತ್ಯ, ಹನುಮನ ವೇಷಧಾರಿಗಳಿಂದ ನೃತ್ಯ, ಹುಲಿ ವೇಷದ ನೃತ್ಯ ಸೇರಿದಂತೆ ಹಲವಾರು ತಂಡಗಳು ಭಾಗವಹಿಸಿದ್ದವು, ನಗರದಲ್ಲಿಯೇ ಇಂತಹ ತಂಡಗಳು ಭಾಗವಹಿಸಿರುವದು ಇದೇ ಪ್ರಥಮ ಎನ್ನಲಾಗಿದೆ. ಮೆರವಣಿಗೆ ಉದ್ದಕ್ಕೂ ಜನರು ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ, ಹೂಗಳಿಂದ ಅಲಂಕರಿಸಿ, ದೇವಿಯ ಮೆರವಣಿಗೆಗೆ ಸ್ವಾಗತಿಸಿದರು.

ಜಗದಂಬಾ ದೇವಿ ದೇವಸ್ಥಾನದಲ್ಲಿ ಮಂಗಳಾರತಿ ಮಾಡುವದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯೂ ರೈಲು ನಿಲ್ದಾಣ, ನೆಹರೂ ವೃತ್ತ, ತ್ರಿಶೂಲ ವೃತ್ತ, ಶ್ರೀರಾಮ ವೃತ್ತ, ಶಾಸ್ತ್ರಿ ವೃತ್ತ, ಸುಭಾಶ್ಚಂದ್ರ ಭೋಸ್ ವೃತ್ತ, ವಲ್ಲಭಭಾಯಿ ಪಟೇಲ ವೃತ್ತ, ಭಾರತ್ ಚೌಕ ಮೂಲಕ ದೇವಸ್ಥಾನ ಇರುವ ಇಂಜನ್ ಫೈಲ್ ತಲುಪಿತು.

ನಂತರ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ವಿಧಿ ಅನ್ವಯ ಜಲಾಧಿವಾಸ ಮಾಡಲಾಯಿತು.

ಮೆರವಣಿಗೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಂಜುಳಾ ಲಿಂಬಾವಳಿ, ವಿಜಯ ಲಿಂಬಾವಳಿ, ಅಶೋಕ ಲಿಂಬಾವಳಿ, ಸುರೇಶ ಲಿಂಬಾವಳಿ, ಭೀಮರಾವ ಲಿಂಬಾವಳಿ, ಜಯಶ್ರೀ ಮತ್ತಿಮಡು, ರವಿ ಬಿರಾದಾರ, ಅಂಬಾದಾಸ ಕುಲಕರ್ಣಿ, ರಾಜೇಶ ವೈಟ್‌ಫೀಲ್ಸ್, ಕಣ್ಣೂರ ಗ್ರಾಪಂ.ಅಧ್ಯಕ್ಷ ಅಶೋಕ ಗೌಡ, ಬಿಜೆಪಿ ಮುಖಂಡ ಪಾಪಣ್ಣ, ಬಿಳ್ಳೆಪ್ಪ, ಬೈರೇಗೌಡ, ಸ್ಥಳೀಯ ಮುಖಂಡರಾದ ಭೀಮರಾವ ಸಾಳೊಂಕೆ, ಕನಕಪ್ಪ ದಂಡಗುಲಕರ್, ಬಸವರಾಜ ಬಿರಾದಾರ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಭಾಗೀರತಿ ಗುನ್ನಾಪುರ, ಶರಣು ಪಗಲಾಪುರ, ಸಿದ್ರಾಮ ಕುಸಾಳೆ, ನಿಂಗಣ್ಣ ಹುಳಗೋಳಕರ್, ರಾಕೇಶ ಪವಾರ, ಯಲ್ಲಪ್ಪ ದಂಡಗುಲಕರ್, ರಾಮು ಕುಸಾಳೆ, ರಾಜು ದಂಡಗುಲಕರ್ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

ಇಡಿ ನಗರದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದ್ದು, ಕಲಬುರಗಿಯ ರಾಜಾಪುರದಿಂದ, ಹಾಗೂ ರಾವೂರದಿಂದ ಶಹಾಬಾದ್ ನಗರದವರೆಗೆ ಕೇಸರಿ ದ್ವಜ, ಕಮಾನು, ಫ್ಲೇಕ್ಸ್‌ಗಳಿಂದ ಅಲಂಕರಿಸಲಾಗಿತ್ತು. ನಗರದಲ್ಲಿ ಎಲ್ಲೆಡೆ ಕೇಸರಿ ದ್ವಜ, ಪರಾರಿ, ಪ್ರತಿ ರಸ್ತೆಗೆ ಬೃಹತ್ ಮಹಾದ್ವಾರಗಳನ್ನು ಅಳವಡಿಸಲಾಗಿತ್ತು. ಇಡಿ ನಗರವು ಸಂಭ್ರಮದಿಂದ ಕಂಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.