ADVERTISEMENT

ಖಾಸಗೀಕರಣವಾದರೆ ಮೀಸಲಾತಿಗೆ ಬೆಲೆ ಎಲ್ಲಿ?

ನ್ಯಾ. ನಾಗಮೋಹನದಾಸ್‌ ಆಯೋಗದಿಂದ ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 2:21 IST
Last Updated 11 ಡಿಸೆಂಬರ್ 2019, 2:21 IST
ಸಭೆಯಲ್ಲಿ ಭಾಗವಹಿಸಿದ್ದ ಆರು ಜಿಲ್ಲೆಗಳ ವಿವಿಧ ಸಂಘಟನೆಗಳ ಮುಖಂಡರು
ಸಭೆಯಲ್ಲಿ ಭಾಗವಹಿಸಿದ್ದ ಆರು ಜಿಲ್ಲೆಗಳ ವಿವಿಧ ಸಂಘಟನೆಗಳ ಮುಖಂಡರು   

ಕಲಬುರ್ಗಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಂದು ಸಾರ್ವಜನಿಕ ಸಂಸ್ಥೆಗಳು, ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪರಿಶಿಷ್ಟರ ನೀಡಲಾಗುತ್ತಿರುವ ಮೀಸಲಾತಿಯ ಪ್ರಯೋಜನ ಪಡೆಯುವುದಾದರೂ ಹೇಗೆ?’

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಿಗೆ ಈಗ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೇ ಎಂಬ ಕುರಿತು ವರದಿ ನೀಡಲು ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಆಯೋಗವು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ವಿಭಾಗ ಮಟ್ಟದ ಸಮಾಲೋಚನಾ ಸಭೆಯಲ್ಲಿ ಹಲವು ದಲಿತ ಮುಖಂಡರಿಂದ ಈ ಪ್ರಶ್ನೆಗಳು ತೂರಿ ಬಂದವು.

ಸಭೆಯಲ್ಲಿ ಮಾತನಾಡಿದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಹಲವು ದಲಿತ ಸಂಘಟನೆಗಳ ಮುಖಂಡರು ಈ ಪ್ರಶ್ನೆಯನ್ನು ಆಯೋಗದ ಎದುರು ಹರಿಬಿಟ್ಟರು.‌

ADVERTISEMENT

ಅಲ್ಲದೇ, ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕರೂ ಬಡ್ತಿ ಸಂದರ್ಭದಲ್ಲಿ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದೇ ಇಲ್ಲ. ಇದು ಉದ್ದೇಶಪೂರ್ವಕವಾಗಿ ಪರಿಶಿಷ್ಟರನ್ನು ಉನ್ನತ ಅಧಿಕಾರದಿಂದ ದೂರವಿಡುವ ಹುನ್ನಾರ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.

ಮೀಸಲಾತಿ ಅನಿವಾರ್ಯ: ‘ಸಂವಿಧಾನದ ಪ್ರಕಾರ ಮೀಸಲಾತಿ ಇದ್ದಾಗಲೂ ಮೀಸಲಾತಿಯ ಲಾಭ ಪಡೆಯಲು ಪರಿಶಿಷ್ಟರಿಗೆ ಆಗುತ್ತಿಲ್ಲ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಮುಂದಿನ 10 ವರ್ಷಗಳವರೆಗೆ ಮೀಸಲಾತಿ ಮುಂದುವರಿಸಬಹುದು ಎಂದು ಡಾ.ಅಂಬೇಡ್ಕರ್‌ ಅವರು ಹೇಳಿದ್ದರು. ಆದರೆ, ಆ ನಂತರವೂ ದಲಿತರು, ಹಿಂದುಳಿದ ವರ್ಗದವರ ಜೀವನದಲ್ಲಿ ನಿರೀಕ್ಷಿತ ಸುಧಾರಣೆ ಕಾಣದ್ದರಿಂದ ಮೀಸಲಾತಿಯನ್ನು ಮುಂದುವರಿಸಲಾಗಿದೆ. ಎಲ್ಲಿಯವರೆಗೂ ಅಸ್ಪೃಶ್ಯತೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಇರಲೇಬೇಕು’ ಎಂದು ಒಕ್ಕೊರಲಿನಿಂದ ಹಲವರು ಪ್ರತಿಪಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಯೋಗದ ಸಂಶೋಧನಾ ಅಧಿಕಾರಿ ಅನಂತ ನಾಯಕ್, ‘ಮೀಸಲಾತಿ ಹೆಚ್ಚಿಸಬೇಕೇ ಎಂಬುದರ ಕುರಿತು ರಾಜ್ಯದಾದ್ಯಂತ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಬೆಂಗಳೂರಿನ ಕನ್ನಡ ಭವನದ ಯವನಿಕಾ ಸಭಾಂಗಣದಲ್ಲಿ ಕೇಂದ್ರ ಕಚೇರಿ ಆರಂಭಿಸಲಾಗಿದೆ. ವಿಭಾಗವಾರು ಸಮಾಲೋಚನಾ ಸಭೆಯಲ್ಲಿ ಮಂಡನೆಯಾದ ಅಭಿಪ್ರಾಯಗಳನ್ನು ಆಯೋಗದ ಮುಖ್ಯಸ್ಥರಾದ ನಾಗಮೋಹನದಾಸ್‌ ಅವರ ನೇತೃತ್ವದಲ್ಲಿ ಪರಿಶೀಲಿಸಲಾಗುವುದು. ಸಭೆ ಮುಗಿದ ಬಳಿಕವೂ ವಿವಿಧ ದಲಿತ ಹಾಗೂ ನೌಕರರ ಸಂಘಟನೆಗಳ ಮುಖಂಡರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಕಳಿಸಬಹುದು’ ಎಂದು ಹೇಳಿದರು.

ಮಧ್ಯಾಹ್ನ 12ಕ್ಕೆ ಆರಂಭವಾದ ಸಭೆಯು 3ರವರೆಗೂ ನಡೆಯಿತು.

ಚಿಂಚೋಳಿಯ ಯುವತಿ ಪವಿತ್ರಾ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಬಲಾಢ್ಯರೇ ಕಬಳಿಸುತ್ತಿದ್ದಾರೆ. ಸಾಲಸೌಲಭ್ಯ ಬೇಕು ಎಂದರೆ ಅಧಿಕಾರಿಗಳಿಗೆ ಲಂಚ ಕೊಡಬೇಕಾಗಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಾಗಮೋಹನದಾಸ್‌ ಅವರು, ನೀವು ಈ ಬಗ್ಗೆ ವಿವರವಾದ ದೂರು ನೀಡಿದರೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಬಲಾಢ್ಯರಿಗೂ ಮೀಸಲಾತಿ: ನ್ಯಾಯಮೂರ್ತಿ ಕಳವಳ
ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಡಾ.ಬಿ.ಆರ್‌.ಅಂಬೇಡ್ಕರ್ ಅವರು ಮೀಸಲಾತಿ ಸೌಲಭ್ಯ ಕಲ್ಪಿಸಿದರು. ಆದರೆ, ವಿವಿಧ ರಾಜ್ಯಗಳಲ್ಲಿ ಬಲಾಢ್ಯರಾಗಿರುವ ಸಮುದಾಯದವರೂ ಮೀಸಲಾತಿ ಕೇಳುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಕಳವಳ ವ್ಯಕ್ತಪಡಿಸಿದರು.

ಮೀಸಲಾತಿಯಿಂದಾಗಿ ಸಾಕಷ್ಟು ದಲಿತರ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳಾಗಿವೆ. ಉನ್ನತ ಹುದ್ದೆಗಳನ್ನೇರಲು ಮೀಸಲಾತಿಯೇ ಕಾರಣವಾಗಿದೆ. ಇದನ್ನು ಅರಿತಿರುವ ಮೇಲ್ಜಾತಿಯವರು ಇದೀಗ ತಮಗೂ ಮೀಸಲಾತಿ ಬೇಕು ಎಂದು ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದಾರೆ.

ಗುಜರಾತ್‌ನಲ್ಲಿ ಪಾಟಿದಾರರು, ರಾಜಸ್ಥಾನದಲ್ಲಿ ಗುಜ್ಜರರು, ಮಹಾರಾಷ್ಟ್ರದಲ್ಲಿ ಮರಾಠರು ಹಾಗೂ ಆಂಧ್ರಪ್ರದೇಶದಲ್ಲಿ ಕಾಪು ಸಮುದಾಯದವರು ಮೀಸಲಾತಿ ಕೇಳುತ್ತಿದ್ದಾರೆ ಎಂದರು.

ಮೀಸಲಾತಿ: ಯಾರು ಏನೆಂದರು?
ಮೀಸಲಾತಿ ಎಂದರೆ ವೃದ್ಧಾಪ್ಯ ವೇತನ ಇದ್ದಂತೆ. ಎಲ್ಲಿಯವರೆಗೂ ಅಸ್ಪೃಶ್ಯತೆಯು ಈ ದೇಶದಲ್ಲಿ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ಮೀಸಲಾತಿಯನ್ನು ದಲಿತರ ಏಳಿಗೆಯ ಉದ್ದೇಶಕ್ಕಾಗಿ ಕೊಡಲೇಬೇಕು. ಅಂಬೇಡ್ಕರ್‌ ಅವರ ‘ಪೂನಾ ಒಪ್ಪಂದ’ದ ಆಶಯವೂ ಇದೇ ಆಗಿತ್ತು. ನ್ಯಾಯಮೂರ್ತಿಯಾದ ನಿಮಗೆ ಇದೆಲ್ಲದರ ಬಗ್ಗೆ ಮಾಹಿತಿ ಇದೆ. ನೀವು ಪರಾಮರ್ಶಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಶಿಫಾರಸು ಮಾಡಿರಿ.
-ಡಾ.ವಿಠಲ ದೊಡ್ಡಮನಿ, ದಲಿತ ಮುಖಂಡ, ಕಲಬುರ್ಗಿ

**

ಉತ್ಪಾದನಾ ವಲಯದಲ್ಲಿ ದುಡಿಯುತ್ತಿರುವವರ ಪೈಕಿ ಶೇ 60ರಷ್ಟು ಜನರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರು. ದೇಶದ ಜಿಡಿಪಿಯ ಶೇ 25ರಷ್ಟು ಪಾಲನ್ನು ಈ ದುಡಿಯುವ ವರ್ಗ ನೀಡುತ್ತಿದೆ. ಹೀಗಾಗಿ, 150 ಬಗೆಯ ಜಾತಿ, ಉಪಜಾತಿಗಳನ್ನು ಒಳಗೊಂಡ ಪರಿಶಿಷ್ಟರಿಗೆ ಪ್ರಸ್ತುತ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲೇಬೇಕು. ಜೊತೆಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಜಾರಿಗೊಳಿಸಬೇಕು.
-ಸುಭಾಷ್‌ ರಾಠೋಡ, ಬಂಜಾರ ಸಮಾಜದ ಮುಖಂಡ, ಕಲಬುರ್ಗಿ

**

ಅನುಭವ ಮಂಟಪದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಲಾಗಿತ್ತು. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಇನ್ನೂ ಎಲ್ಲ ವಲಯಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ದಲಿತ ಮಹಿಳೆಯರಿಗೆ ಮೀಸಲಾತಿಯನ್ವಯ ಎಲ್ಲ ಸೌಲಭ್ಯಗಳು ಸಿಕ್ಕರೆ ಇನ್ನಷ್ಟು ಐಎಎಸ್‌ ಅಧಿಕಾರಿಗಳು ತಯಾರಾಗುತ್ತಾರೆ. ಈ ನಿಟ್ಟಿನಲ್ಲಿ ಆಯೋಗ ಅಗತ್ಯ ಶಿಫಾರಸುಗಳನ್ನು ಮಾಡಬೇಕು.
-ನಾಗರತ್ನ ದೇಶಮಾನೆ, ಕಲಬುರ್ಗಿ

**

ಎಲ್.ಜಿ.ಹಾವನೂರ ವರದಿಯು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಶೋಷಣೆಗೆ ಒಳಗಾಗದ ಬೇರೆ ಜಾತಿಯವರನ್ನು ಸೇರಿಸುವ ಮೂಲಕ ನಿಜವಾದ ಶೋಷಿತ ಸಮುದಾಯವಾದ ಮಾದಿಗರಿಗೆ ಅನ್ಯಾಯ ಮಾಡಿತು. ಹಾವನೂರ ವರದಿಯು ಪರಿಶಿಷ್ಟರಲ್ಲೇ ಮಾದಿಗರ ಪ್ರಮಾಣ ಶೇ 57 ಎಂದು ದಾಖಲಿಸಿತ್ತು. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಶೇ 36 ಇದೆ ಎಂದು ದಾಖಲಿಸಿರುವ ಬಗ್ಗೆ ಗುಮಾನಿಗಳಿವೆ. ಇದು ತಪ್ಪು ಮಾಹಿತಿ. ಮಾದಿಗ ಸಮುದಾಯದ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿಯನ್ನು ನಿಗದಿಪಡಿಸಬೇಕು.
-ಜಗನ್ನಾಥ ಮಾದಿಗ, ಬಳ್ಳಾರಿ

**

ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಇರಿಸಲಾಗಿದ್ದು, ಶೇ 3ರಷ್ಟು ಮಾತ್ರ ಮೀಸಲಾತಿ ಇದೆ. ಇದರಿಂದ ನೌಕರಿ ಪಡೆಯುವ ಸಮುದಾಯದವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕು.
-ದೊಡ್ಡಯ್ಯಸ್ವಾಮಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.