ಕಲಬುರಗಿ: 2022ರ ಜುಲೈನಿಂದ 2024ರ ಜುಲೈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಸಾರ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಆ.22ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಪ್ರಧಾನ ಸಂಚಾಲಕ ಗುರಣ್ಣಾ ಎಸ್. ಅವಂಟಿ ತಿಳಿಸಿದರು.
‘2022ರ ಜುಲೈನಿಂದ ನಿವೃತ್ತರಾದ 26,700 ಅಧಿಕಾರಿ–ನೌಕರ ವರ್ಗದವರಿಗೆ ಆಗಿರುವ ಆರ್ಥಿಕ ನಷ್ಟದ ಕುರಿತು ಸತತವಾಗಿ ಸಿಎಂ, ಡಿಸಿಎಂ, ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ, ಇನ್ನೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಹಾಗಾಗಿ, ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಬೆಂಬಲದೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಳೆದ ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದಾಗ ಅವರು ಒಂದು ವಾರದಲ್ಲಿ ಸಭೆ ಕರೆಯುವುದಾಗಿ ತಿಳಿಸಿದ್ದರು. ಅಲ್ಲದೇ, ಕಳೆದ ಫೆ.28ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸಿದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮೂರು ದಿನಗಳಲ್ಲಿ ಪರಿಹಾರ ಕಲ್ಪಿಸುವುದಾಗಿ ನೀಡಿದ್ದ ಭರವಸೆಯೂ ಹುಸಿಯಾಗಿದೆ’ ಎಂದು ದೂರಿದರು.
ದೇವೇಂದ್ರಕುಮಾರ ಪಾಟೀಲ, ನಾಗಪ್ಪ ನೆಲೋಗಿ, ಸಿದ್ದಯ್ಯ ಅಮದಾನಿಮಠ, ಸಿದ್ದಣ್ಣ ಸಜ್ಜನ, ಮಲಕಪ್ಪ ಅಂಕಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.