
ಕಾಳಗಿ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ, ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ದೇವಸ್ಥಾನ, ರಟಕಲ್ ಗುಡ್ಡವೆಂದೇ ಹೆಸರಾದ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡ ಕಾಳಗಿ ತಾಲ್ಲೂಕಿನಿಂದ ಈಚೆಗೆ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಗೊಂಡಿದೆ.
ಇದರಿಂದ ಕಾಳಗಿ ತಾಲ್ಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರದ ಕೊಂಡಿಯೊಂದು ಕಳಚಿ ಹೋದಂತಾಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿದ್ದಾಗ ಕಂದಗೂಳ ಗ್ರಾಮ ಪಂಚಾಯಿತಿ, ಕಾಳಗಿ ತಾಲ್ಲೂಕಿನಲ್ಲಿದ್ದಾಗ ಅರಣಕಲ್ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದ ರೇವಗ್ಗಿ ಗುಡ್ಡ, ಅರಣಕಲ್ ಗ್ರಾ.ಪಂ ಪೂರ್ತಿ ಕಮಲಾಪುರಕ್ಕೆ ಸೇರಿದ್ದರಿಂದ ಈಗ ಹೊಸ ತಾಲ್ಲೂಕಿನ ಕಳೆ ಹೆಚ್ಚಿಸಿದೆ.
ಆದರೆ, ಈ ದೇವಸ್ಥಾನದ ಆಡಳಿತ ಮಾತ್ರ ಮೊದಲಿನಿಂದಲೂ ಸೇಡಂ ಉಪವಿಭಾಗ (ಎ.ಸಿ) ಅಧಿಕಾರಿಗಳ ಕೈಯಲ್ಲೆ ಮುಂದುವರೆದಿದೆ.
ಅರಣಕಲ್ ಗ್ರಾ.ಪಂ ವ್ಯಾಪ್ತಿಯ ಅರಣಕಲ್, ರೇವಗ್ಗಿ, ಗೊಣಗಿ ಮತ್ತು ಸಿಂಗ್ಯಾನಣಿ ತಾಂಡಾ, ಬುಗಡಿ ತಾಂಡಾ, ಕಿಂಡಿತಾಂಡಾದ ಅರ್ಧ ಜನರು ಹಳೆ ತಾಲ್ಲೂಕು ಕಾಳಗಿನಲ್ಲೇ ಮುಂದುವರೆಯುವ ಮತ್ತು ಇನ್ನರ್ಧ ಜನರು ಕಮಲಾಪುರ ತಾಲ್ಲೂಕು ಬೇಕೆನ್ನುವ ಬಯಕೆ ಕೊನೆಗೂ (28 ಆಗಸ್ಟ್ 2023) ಈಡೇರಿ ಶ್ರೀಕ್ಷೇತ್ರ ರೇವಗ್ಗಿ ಗುಡ್ಡ ಕಾಳಗಿಯಿಂದ ಕೈತಪ್ಪಿದೆ ಎನ್ನುತ್ತಾರೆ ಪರಮ ಭಕ್ತರು.
ಹಾಗಾಗಿ ಶ್ರೀಕ್ಷೇತ್ರ ರೇವಗ್ಗಿ ಗುಡ್ಡದ ಪ್ರತಿ ಕಾರ್ಯಚಟುವಟಿಕೆಯಲ್ಲಿ ಮುಂಚೆ ಪಾಲ್ಗೊಳ್ಳುತ್ತಿದ್ದ ಕಾಳಗಿ ತಹಶೀಲ್ ಕಚೇರಿ ಸಿಬ್ಬಂದಿ ನಾಲ್ಕೈದು ತಿಂಗಳಿಂದ ಹಿಂದಕ್ಕೆ ಸರಿದು, ಕಮಲಾಪುರ ತಹಶೀಲ್ದಾರ್‌ರೇ ಭಾಗಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ, ಚಿತ್ತಾಪುರ ತಾಲ್ಲೂಕಿನಿಂದಲೂ ಹಲವು ವರ್ಷಗಳಿಂದ ಕಾಳಗಿ ನಂಟು ಇಟ್ಟುಕೊಂಡು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದ ಶ್ರೀಕ್ಷೇತ್ರ ರೇವಗ್ಗಿ ಗುಡ್ಡವು, ಈಗ ಕಮಲಾಪುರದ ಶ್ರದ್ಧಾಕೇಂದ್ರವಾಗಿ ಹೊಸ ತಾಲ್ಲೂಕಿನ ಗೌರವಕ್ಕೆ ಪಾತ್ರವಾಗಿದಂತು ನಿಜ.
ಅರಣಕಲ್ ಜನರು ಇನ್ನೂ ಅತಂತ್ರದಲ್ಲೆ..!
ಅರಣಕಲ್ ಗ್ರಾ.ಪಂ ವ್ಯಾಪ್ತಿಯ 3 ಊರು, 3 ತಾಂಡಾ ಭೌಗೋಳಿಕವಾಗಿ ಕಾಳಗಿಕ್ಕಿಂತ ಕಮಲಾಪುರಕ್ಕೆ ಹತ್ತಿರವಾಗುತ್ತವೆ ಎಂಬ ದೃಷ್ಟಿಯಿಂದ ಮತ್ತು ಸ್ಥಳೀಯರ ಕೋರಿಕೆಯ ಮೇರೆಗೆ ಸರ್ಕಾರ ಅವುಗಳನ್ನು ಕಾಳಗಿಯಿಂದ ಬೇರ್ಪಡಿಸಿ 28 ಆಗಸ್ಟ್ 2023ರಂದು ಅಧಿಕೃತವಾಗಿ ಕಮಲಾಪುರ ಹೊಸ ತಾಲ್ಲೂಕಿಗೆ ಸೇರಿಸಿದೆ.
ಆದರೆ, ಈ ಜನರ ಸರ್ಕಾರಿ ಕೆಲಸ ಕಮಲಾಪುರದಲ್ಲಿ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಒಂದಿಲ್ಲೊಂದು ಕೆಲಸಕ್ಕಾಗಿ ಕಾಳಗಿಗೆ ಅಲೆದಾಡುವುದು ಇನ್ನೂ ತಪ್ಪಿಲ್ಲ ಎಂದು ಸ್ಥಳೀಯರು ಗೋಗರೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆಯ ಮೇಲ್ವಿಚಾರಣೆ ಇನ್ನೂ ಕಾಳಗಿಯಲ್ಲೇ ಇದೆ.
ಕಮಲಾಪುರದಲ್ಲಿ ಪಹಣಿ ಸರ್ವೆ ಆದಾಯ-ಜಾತಿ ಪತ್ರ ಇತರ ಸೇವೆ ಲಭ್ಯವಿದೆ. ಬಿತ್ತನೆ ಬೀಜ ಸಿಕ್ಕು ಉಳಿದೆಲ್ಲವು ಕಾಳಗಿ ತಾಲ್ಲೂಕಿನಿಂದಲೇ ಪಡೆದಿದ್ದೇವೆ.ಶಿವರಾಜ ಪಾಟೀಲ, ಗೊಣಗಿ ನಿವಾಸಿ
ಇಲ್ಲಿನ್ನೂ ಅಸ್ತವ್ಯಸ್ಥವೆ ಇದ್ದು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಚೆಕ್ ಮಾಡಲು ಪೊಲೀಸ್ ಠಾಣೆ ಇತರ ಕೆಲಸಕ್ಕಾಗಿ ಇನ್ನೂ ಕಾಳಗಿ ಕಡೆಗೆ ಓಡಾಡುತ್ತಿದ್ದೇವೆಸಂಗಮೇಶ ಕಲಗುರ್ತಿ, ಅರಣಕಲ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.