
ಕಲಬುರಗಿ: ‘ಸಾರ್ವಜನಿಕರಿಗೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸಿದ ಇಬ್ಬರು ಪಿಡಿಒಗಳಿಗೆ ಮೂರು ಪ್ರಕರಣಗಳಲ್ಲಿ ₹65 ಸಾವಿರ ದಂಡ ವಿಧಿಸಿ ಆದೇಶಿಸಲಾಗಿದೆ’ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ್ ಸಿಂಗ್ ತಿಳಿಸಿದರು.
ನಗರದ ರೈಲು ನಿಲ್ದಾಣ ಎದುರುಗಡೆಯ ಮಹಲ್-ಎ-ಶಾಹಿ ಅತಿಥಿಗೃಹ ಆವರಣದಲ್ಲಿರುವ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ತಮ್ಮ ಕಚೇರಿಯಲ್ಲಿ ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಮಾನ್ವಿ ತಾಲ್ಲೂಕಿನ ಸುಂಕೇಶ್ವರ ಗ್ರಾಮ ಪಂಚಾಯಿತಿ ಅಧಿಕಾರಿ ನಾಗಭೂಷಣ ಅವರಿಗೆ ಗುರುಮೂರ್ತಿ ಎನ್ನುವವರು 2022ರಲ್ಲಿ ಮತ್ತು ಜಲಾಲ್ ಎನ್ನುವವರು 2023ರಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಕುರಿತು ಮಾಹಿತಿ ಕೋರಿದ್ದರು. ಮಾಹಿತಿ ಸಿಗದ ಕಾರಣ ಅರ್ಜಿದಾರರು ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿ, ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶಿಸಿದ್ದರೂ ಆಯೋಗದ ನಿರ್ದೇಶನ ಪಾಲಿಸದ ಕಾರಣ ನಾಗಭೂಷಣ ಅವರಿಗೆ ಎರಡೂ ಪ್ರಕರಣದಲ್ಲಿ ತಲಾ ₹25 ಸಾವಿರ ದಂಡ ವಿಧಿಸಲಾಗಿದೆ’ ಎಂದರು.
‘ಇನ್ನೊಂದು ಪ್ರಕರಣದಲ್ಲಿ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಅಡಕಿ ಪಿಡಿಒ ಭಗವಂತರಾಯ ಅವರಿಗೆ 2023ರಲ್ಲಿ ರವಿ ಮದನಕರ್ ಎನ್ನುವವರು ಸಹ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದರು. ಆಯೋಗದ ಮುಂದೆ ಪ್ರಕರಣ ಬಂದಾಗ ವಿಚಾರಣೆ ನಡೆಸಿ, ಅರ್ಜಿದಾರರಿಗೆ ಮಾಹಿತಿ ನೀಡದಿದ್ದರೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೂ ನಿರ್ಲಕ್ಷ್ಯ ವಹಿಸಿದ ಕಾರಣ ಮತ್ತು ಜ.23ರಂದು ವಿಚಾರಣೆಗೂ ಗೈರಾದ ಭಗವಂತರಾಯ ಅವರಿಗೆ ₹15 ಸಾವಿರ ದಂಡ ವಿಧಿಸಲಾಗಿದೆ’ ಎಂದು ವಿವರಿಸಿದರು.
‘ಆಯೋಗವು ಕೇವಲ ದಂಡ ವಿಧಿಸುವ ಜೊತೆಗೆ ದಂಡ ವಸೂಲಿಗೂ ಮುಂದಾಗಿದೆ. ಇದುವರೆಗೆ ಹಣ ಪಾವತಿಸದ ಬಾಗಲಕೋಟೆ ಡಿಎಚ್‌ಒ(ಹಿಂದೆ ಕೊಪ್ಪಳ) ಡಾ.ರಾಜಕುಮಾರ ಯರಗಲ್ ಅವರಿಂದ ₹10 ಸಾವಿರ ಮತ್ತು ರಾಯಚೂರು ಜಿಲ್ಲೆಯ ಯರಮರಸ್ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಅವರಿಂದ ₹15 ಸಾವಿರ ದಂಡ ವಸೂಲಿ ಸಹ ಮಾಡಲಾಗಿದೆ’ ಎಂದು ವೆಂಕಟ್ ಸಿಂಗ್ ತಿಳಿಸಿದರು.
‘ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೆ ಬಂದರೂ ಬಹುತೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೇ ಕಾಯ್ದೆ ಬಗ್ಗೆ ಮಾಹಿತಿ ಕೊರತೆ ಇದೆ. ಕೆಲವರು ಮಾಹಿತಿ ನೀಡಲು ಹೆದರಿದರೆ, ಇನ್ನೂ ಕೆಲವರು ನಿರ್ಲಕ್ಷ್ಯ ವಹಿಸುತ್ತಾರೆ. ಹಾಗಾಗಿ, ಆಯೋಗದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳ ಅಧಿಕಾರಿಗಳಿಗೆ ಕಾರ್ಯಾಗಾರ ಮಾಡಲಾಗುತ್ತಿದೆ’ ಎಂದರು.
‘ದ್ವಿತೀಯ ಮೇಲ್ಮನವಿ ಅರ್ಜಿಯನ್ನು ಬೆಂಗಳೂರಿನಲ್ಲಿರುವ ಆಯೋಗದ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕಾಗಿತ್ತು. ಇನ್ನು ಮುಂದೆ ಫೆ.1ರಿಂದ 19(3)ರಡಿ ನೇರವಾಗಿ ಕಲಬುರಗಿ ಪೀಠದಲ್ಲಿಯೇ ಸಲ್ಲಿಸಬಹುದು’ ಎಂದು ತಿಳಿಸಿದರು.
ಆಯೋಗದ ಕಲಬುರಗಿ ಪೀಠಕ್ಕೆ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡಕ್ಕಾಗಿ ಜಿಲ್ಲಾಧಿಕಾರಿ ಮತ್ತು ಕೆಕೆಆರ್‌ಡಿಬಿ ಹಾಗೂ ಜಿಡಿಎಗೆ ಮನವಿ ಸಲ್ಲಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿದೆಬಿ.ವೆಂಕಟ್ ಸಿಂಗ್ ರಾಜ್ಯ ಮಾಹಿತಿ ಆಯುಕ್ತ ಕಲಬುರಗಿ ಪೀಠ
‘3 ತಿಂಗಳಲ್ಲಿ 400 ಪ್ರಕರಣ ವಿಲೇವಾರಿ’ ‘
ಕಲಬುರಗಿ ಪೀಠದ ಆಯುಕ್ತರಾಗಿ 2025ರ ಅ.21ರಂದು ಅಧಿಕಾರ ವಹಿಸಿಕೊಂಡ ನಂತರ ಮೂರು ತಿಂಗಳಲ್ಲಿ 992 ಪ್ರಕರಣಗಳನ್ನು ವಿಚಾರಣೆ ನಡೆಸಿ 400 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಪೈಕಿ 2010ರಿಂದ 2022ರವರೆಗಿನ ಬಾಕಿ ಇದ್ದ 282 ಪ್ರಕರಣಗಳೂ ವಿಲೇವಾರಿ ಆಗಿವೆ’ ಎಂದು ಬಿ.ವೆಂಕಟ್ ಸಿಂಗ್ ತಿಳಿಸಿದರು. ‘ಹಿಂದಿನ ಆಯುಕ್ತರು ವಿಚಾರಣೆ ನಡೆಸಿದ 882 ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇವಾರಿ ಮಾಡಲಾಗುವುದು. ಕಲಬುರಗಿ ಪೀಠದಲ್ಲಿ ಒಟ್ಟು 6691 ಪ್ರಕರಣಗಳು ಬಾಕಿ ಇದ್ದು ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.