ADVERTISEMENT

ಕಲಬುರ್ಗಿ: ರಸ್ತೆ ಮಧ್ಯೆ ಕಲ್ಲು, ಮಣ್ಣು ತುಂಬಿದ ದಂಧೆಕೋರರು!

ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ ಸ್ಥಳಕ್ಕೆ ಹೋಗದಂತೆ ಫಿರೋಜಾಬಾದ್‌ನಲ್ಲಿ ತಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 6:25 IST
Last Updated 16 ಜುಲೈ 2021, 6:25 IST
ಕಲಬುರ್ಗಿ ತಾಲ್ಲೂಕಿನ ಫಿರೋಜಾಬಾದ್ ಬಳಿ ರುದ್ರೇಶ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಲಾಗಿ ರಸ್ತೆಯ ಮೇಲೆ ಕಲ್ಲುಗಳನ್ನು ಹಾಕಿ ಬಂದ್ ಮಾಡಿರುವುದು
ಕಲಬುರ್ಗಿ ತಾಲ್ಲೂಕಿನ ಫಿರೋಜಾಬಾದ್ ಬಳಿ ರುದ್ರೇಶ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಲಾಗಿ ರಸ್ತೆಯ ಮೇಲೆ ಕಲ್ಲುಗಳನ್ನು ಹಾಕಿ ಬಂದ್ ಮಾಡಿರುವುದು   

ಕಲಬುರ್ಗಿ: ತಾಲ್ಲೂಕಿನ ಫಿರೋಜಾಬಾದ್ ಸಮೀಪದ ಭೀಮಾ ತೀರದಲ್ಲಿ ಸಂಗ್ರಹಿಸಿದ್ದ ಮರಳನ್ನು ನೋಡಲೆಂದು ತೆರಳುತ್ತಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ದ ಅಧ್ಯಕ್ಷ ಎಂ. ರುದ್ರೇಶ್‌ ಅವರು ಬಾರದಂತೆ ತಡೆಯಲು ಮರಳು ದಂಧೆಕೋರರು ರಸ್ತೆಗೆ ಅಡ್ಡಲಾಗಿ ಕಲ್ಲು ಹಾಗೂ ಮಣ್ಣು ತುಂಬಿದ ಘಟನೆ ಗುರುವಾರ ನಡೆದಿದೆ.

ನಿಗಮದ ಹೆಸರಿನಲ್ಲಿ ಕೆಲ ಅಧಿಕಾರಿಗಳು ಸೇರಿಕೊಂಡು ಭೀಮಾನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಣೆ ಮಾಡುವ ಸಲುವಾಗಿ ಅಪಾರ ಪ್ರಮಾಣದ ಮರಳು ಸಂಗ್ರಹಿಸಿದ್ದಾರೆಎಂಬ ಮಾಹಿತಿ ಅರಿತ ರುದ್ರೇಶ್ ವಾಸ್ತವ ಸ್ಥಿತಿ ಅರಿಯಲು ಸ್ಥಳಕ್ಕೆ ತೆರಳಲು ಯತ್ನಿಸಿದರು. ನಾಲ್ಕೈದು ಕಡೆ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಅಂತಿಮವಾಗಿ ಕಾರನ್ನು ರಸ್ತೆ ಮೇಲೆಯೇ ಬಿಟ್ಟು ಅಧಿಕಾರಿಗಳು ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರೊಂದಿಗೆ ನಡೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದರು.

ಈ ಕುರಿತು ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮರಳು ದಂಧೆ ಅಕ್ರಮಗಳಲ್ಲಿ ಶಾಮೀಲಾಗಿರುವ ಕೆಆರ್‌ಐಡಿಎಲ್ ಎಂಜಿನಿಯರ್‌ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲು ಸೂಚನೆ ನೀಡಿದ್ದೇನೆ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಫಿರೋಜಾಬಾದ್ ಸುತ್ತಲಿನ ಭೀಮಾ ತೀರದಲ್ಲಿ ಕೆಆರ್‌ಡಿಎಲ್ ಹೆಸರಿನಲ್ಲಿ, ಸಂಸ್ಥೆಯ ಕೆಲ ಅಧಿಕಾರಿಗಳು ಸೇರಿಕೊಂಡು ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ದೂರುಗಳ ಬಂದಿವೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಬಂದಿದ್ದು, ಈ ಕುರಿತು ಇಲಾಖೆ ತನಿಖೆ ನಡೆಸಿ ವಾರದಲ್ಲಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳನ್ನು ‌ಸುಮ್ಮನೇ ಬಿಡುವುದಿಲ್ಲ’ ಎಂದು ಅವರು ಹೇಳಿದರು.

‘ಹಿಂದಿನ ಸರ್ಕಾರದಲ್ಲಿ ನಿಗಮಕ್ಕೆ ಮರಳು ಜಾಗ ಮಂಜೂರಾಗಿತ್ತು. ಅಕ್ರಮ ಮರಳು ಸಾಗಣೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲು
ಜಿಲ್ಲಾಧಿಕಾರಿ ಅವರಿಗೆ ಶಿಫಾರಸು ಮಾಡಲಾಗುವುದು. ಇನ್ನು ಮುಂದೆ ಕೆಆರ್‌ಡಿಎಲ್‌ದಿಂದ ಮರಳು ಸಾಗಣೆ ಮಾಡುವುದಿಲ್ಲ. ಅದನ್ನು ಜಿಲ್ಲಾಡಳಿತವೇ ನಡೆಸಲಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಂಡು ನಮಗೆ ವಹಿಸಿದರೆ ನಾವು ಸಾಗಣೆ ಮಾಡಲಿದ್ದೇವೆ’ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಶರಣಬಸಪ್ಪ ನಾಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.