ಅಫಜಲಪುರ: ತಾಲ್ಲೂಕಿನಲ್ಲಿ ಶುಕ್ರವಾರ ಕೆಲವೆಡೆ ಧಾರಾಕಾರ ಮಳೆಯಾಗಿದ್ದು, ಸಿದ್ದನೂರು ಗ್ರಾಮದಿಂದ ರೇವೂರು(ಬಿ) ಗ್ರಾಮಕ್ಕೆ ಸಂಚರಿಸುವ ರಸ್ತೆ ಮೇಲೆ ನೀರು ಸಂಗ್ರವಾಗಿದ್ದು, ಸಂಚಾರ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.
‘ಸಿದ್ದನೂರು ಗ್ರಾಮದಿಂದ ರೇವೂರು(ಬಿ) ಗ್ರಾಮದವರಿಗೆ ಸಂಚರಿಸುವ ನಾಲ್ಕು ಕಿಲೋಮೀಟರ್ ರಸ್ತೆ ಎತ್ತರವಿಲ್ಲದ ಕಾರಣ ಮಳೆಗೆ ನೀರು ರಸ್ತೆ ಮೇಲೆ ಸಂಗ್ರವಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದ ಇಲಾಖೆಯವರು ರಸ್ತೆ ಎತ್ತರಿಸುವ ಜೊತೆಗೆ ನೀರು ಸಂಗ್ರಹವಾಗುವ ಸ್ಥಳದಲ್ಲಿ ಸೇತುವೆ ನಿರ್ಮಿಸಿ, ಗ್ರಾಮಸ್ಥರ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮದ ಮೈಬೂಬ್ ನದಾಫ್, ಪ್ರವೀಣ್ ಹೆರೂರ್ ಒತ್ತಾಯಿಸಿದ್ದಾರೆ.
‘ಮಳೆ ಬಂದ ನಂತರ ರಸ್ತೆ ಮೇಲಿನ ನೀರು ಕಡಿಮೆಯಾಗಲು ಕನಿಷ್ಠ ಒಂದು ವಾರ ಬೇಕಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ ಜನಪ್ರತಿನಿಧಿಗಳು ಗ್ರಾಮ ಸಮಸ್ಯೆ ಬಗೆಹರಿಸಬೇಕು. ರಸ್ತೆ ಸುಧಾರಣೆ ಮಾಡದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಮುಖಂಡ ಶಬೀಕ ಸೇಡಂ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.