ADVERTISEMENT

ರಸ್ತೆ ಸುಸ್ಥಿತಿಯಲ್ಲಿದ್ದರೂ ಮತ್ತೆ ಡಾಂಬರೀಕರಣ!

ಲೋಕೋಪಯೋಗಿ ಇಲಾಖೆಯಿಂದ 3 ಕಿ.ಮೀ. ರಸ್ತೆಗೆ ₹ 1.25 ಕೋಟಿ ವೆಚ್ಚ

ಮನೋಜ ಕುಮಾರ್ ಗುದ್ದಿ
Published 2 ಅಕ್ಟೋಬರ್ 2022, 6:21 IST
Last Updated 2 ಅಕ್ಟೋಬರ್ 2022, 6:21 IST
ಸುಸ್ಥಿತಿಯಲ್ಲಿರುವ ಕಲಬುರಗಿಯ ಹೊಸ ಆರ್‌ಟಿಒ ಕಚೇರಿ ಬಳಿಯ ಕುಸನೂರು ರಸ್ತೆಗೆ ಶನಿವಾರ ಡಾಂಬರೀಕರಣ ಮಾಡಿರುವುದು
ಸುಸ್ಥಿತಿಯಲ್ಲಿರುವ ಕಲಬುರಗಿಯ ಹೊಸ ಆರ್‌ಟಿಒ ಕಚೇರಿ ಬಳಿಯ ಕುಸನೂರು ರಸ್ತೆಗೆ ಶನಿವಾರ ಡಾಂಬರೀಕರಣ ಮಾಡಿರುವುದು   

ಕಲಬುರಗಿ: ನಗರದ ಹಲವು ಕಡೆ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಪ್ರಕ್ರಿಯೆ ನಡೆಯುತ್ತಿಲ್ಲ. ಆದರೆ, ಸುಸ್ಥಿತಿಯಲ್ಲಿರುವ ರಸ್ತೆ ಮೇಲೆಯೇ ಶನಿವಾರ ಡಾಂಬರು ಹಾಕಲಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ₹ 1.25 ಕೋಟಿ ಖರ್ಚು ಮಾಡಿದೆ!

ಹೊಸ ಆರ್‌ಟಿಒ ಕಚೇರಿಯ ಗೇಟ್‌ ಸಮೀಪದ ಕುಸನೂರ ರಸ್ತೆಯ 3 ಕಿ.ಮೀ. ಉದ್ದ ಡಾಂಬರ್ ಹಾಕಲಾಗಿದೆ. ಆದರೆ, ಇಡೀ ರಸ್ತೆಯಲ್ಲಿ ಸಣ್ಣ ಪುಟ್ಟ ತಗ್ಗು, ಸ್ಪೀಡ್ ಬ್ರೇಕರ್ ಹೊರತುಪಡಿಸಿ ರಸ್ತೆ ಸುಸ್ಥಿತಿಯಲ್ಲಿದೆ. ಆರ್‌ಟಿಒ ಕಚೇರಿ ಎದುರಿನ ಈ ರಸ್ತೆಯಲ್ಲಿ ಚರಂಡಿ ನೀರು ಹರಿಯುತಿತ್ತು. ಅಲ್ಲಿ ಕಲ್ವರ್ಟ್ ನಿರ್ಮಿಸಿ ರಸ್ತೆ ಎತ್ತರಿಸಲಾಗಿದೆ. ಇದು ಆಗಿ ತಿಂಗಳಾನುಗಟ್ಟಲೇ ಕಲ್ವರ್ಟ್ ಅಕ್ಕಪಕ್ಕ ಡಾಂಬರೀಕರಣ ಮಾಡಿ ದುರಸ್ತಿ ಮಾಡುವ ಗೋಜಿಗೆ ಹೋಗಿರಲಿಲ್ಲ.

‘ಪ್ರಜಾವಾಣಿ’ ಈ ಕುರಿತು ವರದಿ ಪ್ರಕಟಿಸಿದ ಬಳಿಕ ಕಲ್ವರ್ಟ್ ಸುತ್ತಲೂ ರಸ್ತೆ ದುರಸ್ತಿ ಮಾಡಲಾಯಿತು. ಅದಾದ ಕೆಲ ದಿನಗಳಲ್ಲಿಯೇ ಅಲ್ಲಿ ಮತ್ತೆ ತಗ್ಗುಗಳು ಕಂಡು ಬಂದವು.

ADVERTISEMENT

2009ರಲ್ಲಿ ರಸ್ತೆ ನಿರ್ಮಾಣ: ಕಲಬುರಗಿಯ ರಿಂಗ್‌ ರಸ್ತೆಯಿಂದ ಕುಸನೂರು ಗ್ರಾಮವನ್ನು ಸಂಪರ್ಕಿಸುವ ಈ ರಸ್ತೆಯನ್ನು 2009ರಲ್ಲೇ ಮೊದಲ ಬಾರಿಗೆ ನಿರ್ಮಿಸಲಾಗಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರು ಕಲಬುರಗಿಗೆ ಭೇಟಿ ನೀಡಿದ್ದ ವೇಳೆ ಬುದ್ಧ ವಿಹಾರ ಉದ್ಘಾಟನೆಗೆ ತೆರಳಲು ಈ ರಸ್ತೆ ಆಯ್ಕೆ ಮಾಡಲಾಗಿತ್ತು. ನಂತರ ಬಳಿಕ ಹಲವು ಬಾರಿ ದುರಸ್ತಿ ಕಾರ್ಯ ನಡೆದಿದ್ದು, ಈಗಲೂ ಸುಸ್ಥಿತಿಯಲ್ಲಿದೆ.

‘ಶನಿವಾರ ಬೆಳಿಗ್ಗೆ ರಸ್ತೆಯಲ್ಲಿ ಜನರು ಸಂಚರಿಸುತ್ತಿದ್ದರೂ ಲೆಕ್ಕಿಸದೇ ತರಾತುರಿಯಲ್ಲಿ ಡಾಂಬರು ಹಾಕಲಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಗಳ ಡಾಂಬರೀಕರಣ ಕಾರ್ಯ ನಡೆಯುತ್ತದೆ’ ಎಂದು ಪೂಜಾ ಕಾಲೊನಿ ನಿವಾಸಿ ಚನ್ನಬಸಪ್ಪ ತಿಳಿಸಿದರು.

‘3 ಕಿ.ಮೀ. ರಸ್ತೆಯ ದುರಸ್ತಿ ಕಾಮಗಾರಿಯನ್ನು ₹ 1.25 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇಲಾಖೆಯ ಅಪೆಂಡಿಕ್ಸ್ ಲೆಕ್ಕ ಶೀರ್ಷಕೆಯಡಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಂಟೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಬುರಗಿಯ ಹೊಸ ಆರ್‌ಟಿಒ ಕಚೇರಿ ಬಳಿಯ ಕುಸನೂರ ರಸ್ತೆ ಉತ್ತಮ ಸ್ಥಿತಿಯಲ್ಲಿದ್ದರೂ ಮರು ಡಾಂಬರೀಕರಣ ಮಾಡಿದ್ದು ಏಕೆ ಎಂಬ ಬಗ್ಗೆ ಪರಿಶೀಲನೆ ನಡೆಸುವೆ.
ಯಶವಂತ ವಿ. ಗುರುಕರ್, ಜಿಲ್ಲಾಧಿಕಾರಿ

ಕುಸನೂರ ರಸ್ತೆ ಡಾಂಬರೀಕರಣ ಮಾಡುವ ಬದಲು ಸಾಕಷ್ಟು ಹದಗೆಟ್ಟಿರುವ ಖರ್ಗೆ ಪೆಟ್ರೋಲ್ ಪಂಪ್ ಸುತ್ತಮುತ್ತಲಿನ ಒಳರಸ್ತೆಗಳನ್ನು ದುರಸ್ತಿ ಮಾಡಬೇಕಿತ್ತು.ಮ್ಯಾನ್‌ಹೋಲ್‌ಗಾಗಿ ಅಗೆದು ಹಾಗೇ ಬಿಡಲಾಗಿದೆ.
ಶಂಕ್ರಯ್ಯ ಘಂಟಿ, ಜಿಡಿಎ ಲೇಔಟ್, ಕುಸನೂರ ರಸ್ತೆ

ಹದಗೆಟ್ಟ ರಸ್ತೆಗಳಿವು...

ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಸಮೀಪದ ರಾಜಾಪುರ ರಸ್ತೆ

ಮಿನಿ ವಿಧಾನಸೌಧ ಎದುರಿನ ಐವಾನ್ ಇ ಶಾಹಿ ರಸ್ತೆ

ಬಂಬೂ ಬಜಾರ್, ಫಿಲ್ಟರ್ ಬೆಡ್ ರಸ್ತೆ

ತಾಜ ಸುಲ್ತಾನಪುರ ಮಾರ್ಕೆಟ್ ರಸ್ತೆ

ಗುವಿವಿ ಡಾ.ಅಂಬೇಡ್ಕರ್ ಭವನದ ರಸ್ತೆ

ವಿಶ್ವವಿದ್ಯಾಲಯ ಲೇಔಟ್, ಸೇಡಂ ರಸ್ತೆ

ಲಾಲಗೇರಿ ಕ್ರಾಸ್‌ನಿಂದ ಶಹಾ ಬಜಾರ್ ನಾಕಾ ಮಧ್ಯದ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.