ಕಲಬುರಗಿ: ಭೀಮಾ ನದಿ ಪ್ರವಾಹದಿಂದಾಗಿ ರಸ್ತೆ, ಓಣಿಗಳಲ್ಲಿ ತುಂಬಿಕೊಂಡಿದ್ದ ಕೆಸರನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರ ಸೂಚನೆ ಮೇರೆಗೆ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಸಿಬ್ಬಂದಿ ಭಾನುವಾರ ತೆರವುಗೊಳಿಸಿದರು.
ಪ್ರವಾಹ ಇಳಿದಿದ್ದರೂ ಕಲಬುರಗಿ ಹಾಗೂ ಜೇವರ್ಗಿ ತಾಲ್ಲೂಕು ಸೇರಿದಂತೆ ನೆರೆ ಪೀಡಿತ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೆಸರು ಹಾಗೂ ಕೊಳಚೆ ತುಂಬಿಕೊಂಡಿದ್ದರಿಂದ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳಲು ಹಿಂಜರಿಯುತ್ತಿರುವ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪಂಚಾಯಿತಿ ಸಿಬ್ಬಂದಿಯು ಯಂತ್ರಗಳನ್ನು ಬಳಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸ್ವಚ್ಛಗೊಳಿಸಿದರು.
ಭಾರಿ ಪ್ರವಾಹಕ್ಕೆ ಸಿಲುಕಿದ್ದ ಫಿರೋಜಾಬಾದ್, ತಾಡತೆಗನೂರ, ಮಳೆಯಿಂದ ಜಲಾವೃತವಾಗಿದ್ದ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಕೆಸರು ಹಾಗೂ ಮಳೆ ನೀರಿನೊಂದಿಗೆ ಬಂದ ಕಸವನ್ನು ತೆರವುಗೊಳಿಸಲಾಯಿತು.
ಕಾಳಜಿ ಕೇಂದ್ರಗಳಲ್ಲಿ ಉಳಿದಿರುವ ನೆರೆ ಸಂತ್ರಸ್ತರಿಗಾಗಿ ಕ್ಯಾನ್‌ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಕ್ಯಾನ್ ಹಾಗೂ ಟ್ಯಾಂಕರ್‌ಗಳ ಮೂಲಕ ಪೂರೈಸಲಾಗುತ್ತಿದೆ. ಜಲಮೂಲಗಳಲ್ಲಿ ನೀರೆತ್ತುವ ಮೊದಲು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಲಾಗುತ್ತಿಎದ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.