ಕಲಬುರಗಿ: ನಗರದ ಸಬರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿಶೀಟರ್, ಹಾಗರಗಾ ಕ್ರಾಸ್ ಸಮೀಪದ ನಿವಾಸಿ ಹಾಜಿ ಸರ್ವತ್ ಅಲಿ ಅಲಿಯಾಸ್ ಸರ್ವತ್‌ಅಲಿ ತೋರನಹಳ್ಳಿ (39)ಯನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಆರೋಪಿ ಸರ್ವತ್‌ಅಲಿ ವಿರುದ್ಧ 9 ಘೋರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ಆರೋಪಿಯು ‘ಎ’ ರೌಡಿ ಎಂದು ಗುರುತಿಸಲಾಗಿದ್ದು, ರೌಡಿಶೀಟ್ ಚಾಲ್ತಿಯಲ್ಲಿದೆ. ಭಾರತೀಯ ದಂಡ ಸಂಹಿತೆ, ಭಾರತೀಯ ಆಯುಧ ಕಾಯ್ದೆ ಹಾಗೂ ಬಿ.ಎನ್.ಎಸ್. ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿ ಕಲಬುರಗಿ ನಗರದ ವಿವಿಧ ಠಾಣೆಗಳಲ್ಲಿ ಮತ್ತು ಹೊರ ಜಿಲ್ಲೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಹಲ್ಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಾ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಹೀಗಾಗಿ ಸದರಿ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸುವುದು ಸೂಕ್ತ ಮತ್ತು ಅನಿವಾರ್ಯವಾಗಿದೆ’ ಎಂದು ನಗರದ ಸಬರ್ಬನ್ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಲ್ಲಿ ವರದಿ ನೀಡಿದ್ದರು. ಅದರನ್ವಯ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಮೈಸೂರು ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬರಲು ಆದೇಶಿಸಿದ್ದಾರೆ.
₹39 ಲಕ್ಷ ಮೌಲ್ಯದ ಮಾದಕ ವಸ್ತು ನಾಶ
ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾದ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ತಡೆ ಕಾಯ್ದೆ (ಎನ್‌ಡಿಪಿಎಸ್) ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ₹39 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಸೋಮವಾರ ನಾಶಪಡಿಸಿದರು.
ಒಟ್ಟು 15 ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡ ಮಾದಕ ವಸ್ತುಗಳಾದ ₹11.63 ಲಕ್ಷ ಮೌಲ್ಯದ 19 ಕೆ.ಜಿ 18 ಗ್ರಾಂ ಗಾಂಜಾ, ₹27.11 ಲಕ್ಷ ಮೌಲ್ಯದ 778 ಕೆ.ಜಿ ಟ್ಯಾಬ್ಲೆಟ್ಸ್/ಸಿರಪ್ ಸೇರಿದಂತೆ ಒಟ್ಟು ₹38.74 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಾಡಿಯ ಸಿಮೆಂಟ್ ಕಾರ್ಖಾನೆಯಲ್ಲಿ ನಾಶಪಡಿಸಿ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಕಮಿಷನರೇಟ್‌ನ ಡಿಸಿಪಿ ಪ್ರವೀಣ ಎಚ್.ನಾಯಕ, ಸಿಸಿಬಿ ಎಸಿಪಿ ಸಂತೋಷ ಬನ್ನಟ್ಟಿ, ಪಿಎಸ್‌ಐ ಶಿವಪ್ಪ ಸೇರಿದಂತೆ ಪರಿಸರ ಅಧಿಕಾರಿಗಳು, ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
- ಇಸ್ಪೀಟ್ ಜೂಜಾಟ; ₹44 ಸಾವಿರ ಜಪ್ತಿ: ನಗರದ ವಿವಿಧೆಡೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಕ್ರಮಕೈಗೊಂಡಿರುವ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 19 ಆರೋಪಿಗಳಿಂದ ಒಟ್ಟು ₹44490 ವಶಕ್ಕೆ ಪಡೆದಿದ್ದಾರೆ. ಒಂದು ಪ್ರಕರಣದಲ್ಲಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಲಾಡ್ಜ್‌ವೊಂದರ ಮೊದಲ ಮಹಡಿಯಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿತ್ತು. ಪೊಲೀಸರು ದಾಳಿ ನಡೆಸಿ ಪಣಕ್ಕೆ ಹಚ್ಚಿದ್ದ ₹12250 ಸೇರಿದಂತೆ ಒಟ್ಟು ₹35450 ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಗರದ ಖೂಬಾ ಪ್ಲಾಟ್ ಸಮೀಪದ ಈಶ್ವರ ಗುಡಿಯ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿ ವಿರುದ್ಧ ಪೊಲೀಸರು ಕ್ರಮಗೊಂಡು ₹9040 ವಶಕ್ಕೆ ಪಡೆದ್ದಾರೆ. ಈ ಕುರಿತು ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.