
ಕಲಬುರಗಿ: ‘ಆರ್‌ಎಸ್‌ಎಸ್ ನಿಷೇಧಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ದಲಿತ ಸೇನೆಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಯಿಂದ ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್, ಸರ್ದಾರ್ ಪಟೇಲ್ ವೃತ್ತ, ಕನ್ನಡ ಭವನದ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡೋಲು, ತಮಟೆ ಬಾರಿಸುತ್ತ ಕೈಯಲ್ಲಿ ನೀಲಿ ಬಾವುಟ, ಸಂವಿಧಾನ ಪೀಠಿಕೆ, ಡಾ.ಅಂಬೇಡ್ಕರ್ ಚಿತ್ರ, ಸುಪ್ರೀಂಕೋರ್ಟ್ ಸಿಜೆ ಬಿ.ಆರ್.ಗವಾಯಿ, ಸಚಿವ ಪ್ರಿಯಾಂಕ್ ಖರ್ಗೆ ಚಿತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳೂ ಮೊಳಗಿದವು.
ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು.
‘ದೇಶದಲ್ಲಿ ನಡೆಯುತ್ತಿರುವ ನ್ಯಾಯಾಂಗದ ಮೇಲಿನ ದಾಳಿ ಶೋಷಿತ ಸಮುದಾಯದ ಮೇಲಿನ ಅತ್ಯಾಚಾರ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜಾತಿ ತಾರತಮ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ತೇಜೋವಧೆ ಮತ್ತು ಸಾರ್ವಜನಿಕವಾಗಿ ನಿಂದನೆ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಲಿತ ಸೇನೆ ರಾಜ್ಯ ಸಮಿತಿ ಅಧ್ಯಕ್ಷ ಹನುಮಂತ ಯಳಸಂಗಿ, ‘ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ್ದು, ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಜಾತಿ ತಾರತಮ್ಯದಿಂದ ಆತ್ಮಹತ್ಯೆ, ಆರ್‌ಎಸ್‌ಎಸ್ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ, ತೇಜೋವಧೆಗಳೆಲ್ಲ ಅದಕ್ಕೆ ನಿದರ್ಶನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ರಾಷ್ಟ್ರಪತಿ ಅವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಜಾವೀದ್ ಖಾನ್, ಶಿವಲಿಂಗ ಮಾಡ್ಯಾಳ, ದಶರಥ ಕಾಂಬಳೆ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಕಪೀಲ ವಾಲಿ, ಎಂ.ಡಿ. ಅಶ್ರಫ್‌ಅಲಿ, ಸುನೀಲ್ ಶಿಂದೆ, ಅರವಿಂದ ಕಮಲಾಪುರ, ಗುರು ಮಾಳಗೆ, ಮಲ್ಲೇಶಿ ಯಾದವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ದಲಿತರ ಭಾವನೆಗೆ ಧಕ್ಕೆ ತರುವ ಯತ್ನ’
‘ಸಚಿವ ಪ್ರಿಯಾಂಕ್ ತವರು ಕ್ಷೇತ್ರದ ಚಿತ್ತಾಪುರದಲ್ಲಿ ಪಟ್ಟುಹಿಡಿದು ಆರ್‌ಎಸ್‌ಎಸ್ ತನ್ನ ಶತಾಬ್ದಿಯ ಪಥಸಂಚಲನ ನಡೆಸಲು ಪ್ರಯತ್ನಿಸುತ್ತಿದೆ. ಇದು ದಲಿತರ ಭಾವನೆಗಳಿಗೆ ಧಕ್ಕೆ ತರುವ ಯತ್ನವಾಗಿದೆ. ಸಚಿವ ಪ್ರಿಯಾಂಕ್‌ಗೆ ಬೆದರಿಕೆ ಹಾಕಿದ ಆರೋಪಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆರ್‌ಎಸ್‌ಎಸ್ ದೇಶಭಕ್ತಿ ಹೆಸರಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳ ಯುವಕರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಈ ದೇಶದ ಯುವಕರು ಈ ದೇಶದ ನೆಲದ ಕಾನೂನು ನ್ಯಾಯಾಂಗ ವ್ಯವಸ್ಥೆ ಉಳಿಸಲು ಆರ್‌ಎಸ್‌ಎಸ್ ನಿಷೇಧಿಸಬೇಕು’ ಎಂದು ಹನುಮಂತ ಯಳಸಂಗಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.