ADVERTISEMENT

ಆರ್‌ಎಸ್‌ಎಸ್‌ನಿಂದ ಸಹಭೋಜನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:21 IST
Last Updated 26 ಡಿಸೆಂಬರ್ 2025, 6:21 IST
ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಆರ್‌ಎಸ್‌ಎಸ್‌ ವತಿಯಿಂದ ಮಹಾ ಸಾಂಘಿಕ, ಸಹ ಭೋಜನ ಕಾರ್ಯಕ್ರಮ ನಡೆಯಿತು
ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಆರ್‌ಎಸ್‌ಎಸ್‌ ವತಿಯಿಂದ ಮಹಾ ಸಾಂಘಿಕ, ಸಹ ಭೋಜನ ಕಾರ್ಯಕ್ರಮ ನಡೆಯಿತು   

ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ವತಿಯಿಂದ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಗುರುವಾರ ಸಂಜೆ ಮಹಾ ಸಾಂಘಿಕ, ಸಹ ಭೋಜನ ಕಾರ್ಯಕ್ರಮ ನಡೆಯಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಜನ ಸಹಭೋಜನದಲ್ಲಿ ಭಾಗವಹಿಸಿದ್ದರು.

ಮುಖ್ಯ ವಕ್ತಾರರಾಗಿ ಮಾತನಾಡಿದ ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಸಹ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ, ‘ಕುಟುಂಬ ಪ್ರಭೋಧನ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ, ಸಾಮಾಜಿಕ ಸಾಮರಸ್ಯ ಹಾಗೂ ಸ್ವದೇಶಿ ಬಳಕೆ ಈ ಪಂಚ ಪರಿವರ್ತನೆ ಸಮಾಜದಲ್ಲಿ ಅಳವಡಿಸಿದಾಗ ಭಾರತ ಜಗತ್‌ ಜನನಿಯಾಗುವುದರಲ್ಲಿ ಸಂದೇಹವಿಲ್ಲ. ಸಂಘದ ಶತಮಾನೋತ್ಸವ ಹಿನ್ನೆಲೆ ಈ ಪಂಚ ಪರಿವರ್ತನೆ ಸಮಾಜದಲ್ಲಿ ತರುವ ಪ್ರಯತ್ನ ಸಮಾಜದ ಪ್ರತಿಯೊಬ್ಬನ ಕರ್ತವ್ಯವಾಗಬೇಕು’ ಎಂದು ಹೇಳಿದರು.

‘ರಾಷ್ಟ್ರ ನಿರ್ಮಾಣದಲ್ಲಿ ಕುಟುಂಬವೊಂದರ ಪಾತ್ರದ ಮಹತ್ವ ಕುರಿತು ಅರಿವು ಮೂಡಿಸುತ್ತಾ ರಚನಾತ್ಮಕ ಕಾರ್ಯಗಳೊಂದಿಗೆ ಕಾರ್ಯಪ್ರವೃತ್ತವಾಗಿರುವ ವಿಶಿಷ್ಟ ಯೋಜನೆಯೇ ಕುಟುಂಬ ಪ್ರಭೋಧನವಾಗಿದೆ. ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಉಳಿಗಾಲವಿದೆ’ ಎಂದು ತಿಳಿಸಿದರು.

ADVERTISEMENT

‘ಸಮಾಜದಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ನಮ್ಮವರು ಎಂಬ ಭಾವ ಮೂಡಿಸಿ, ಸಾಮಾಜಿಕ ಸಾಮರಸ್ಯ ನಿರ್ಮಾಣ ಮಾಡಬಹುದಾಗಿದೆ. ಅದೇ ರೀತಿ ಸಂಚಾರ ನಿಯಮ ಪಾಲನೆ, ಹಿರಿಯರಿಗೆ ಗೌರವದಂತಹ ಕರ್ತವ್ಯಗಳ ಪಾಲನೆ ಮೂಲಕ ನಾಗರಿಕತೆ ಏನೆಂಬುದು ಅರಿಯಬೇಕು. ಸ್ವದೇಶಿ ಉತ್ಪನ್ನಗಳ ಬಳಕೆಯಿಂದ ನಾವು ನಮ್ಮತನವನ್ನು ಎತ್ತಿ ಹಿಡಿಯಬೇಕಾಗಿದೆ’ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಿರೀಶ ಹೆಬ್ಬಾರ, ಆರ್‌ಎಸ್‌ಎಸ್‌ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ನಗರ ಕಾರ್ಯವಾಹ ಸಂಜೀವ ಹುಲಿಮನಿ ಇದ್ದರು. ಮಾನಸ್ ಪೂಜಾರಿ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.