ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನಡೆಸಲು ಯೋಜಿಸಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಬಾರದು. ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರೊ. ಆರ್.ಕೆ. ಹುಡಗಿ, ಮೀನಾಕ್ಷಿ ಬಾಳಿ, ಕೆ. ನೀಲಾ, ಪ್ರಭು ಖಾನಾಪುರೆ, ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಆರ್.ಜಿ. ಶಟಕಾರ, ಪ್ರಭುಲಿಂಗ ಮಹಾಗಾಂವಕರ್, ಸುರೇಶ ಹಾದಿಮನಿ, ಅಶೋಕ ಘೂಳಿ, ಮಾರುತಿ ಗೋಖಲೆ, ರವಿ ಸಜ್ಜನ್, ಅರ್ಜುನ್ ಗೊಬ್ಬೂರ, ಪದ್ಮಾ ಪಾಟೀಲ, ಪದ್ಮಿನಿ ಕಿರಣಗಿ, ಮಹೇಶಕುಮಾರ್ ರಾಠೋಡ, ನಾಗೇಂದ್ರ ಕೆ. ಜವಳಿ, ದತ್ತಾತ್ರೆಯ ಇಕ್ಕಳಕಿ, ಸುಧಾಮ ಧನ್ನಿ, ‘ಕರ್ನಾಟಕದಾದ್ಯಂತ ಜನರು ಚಿತ್ತಾಪುರದಲ್ಲಿ ಸೇರುವಂತೆ ಒತ್ತಾಯಿಸುವ ಕರೆಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಒಂದು ಲಕ್ಷ ಜನರು ಸೇರಬಹುದು ಎಂಬ ಹೇಳಿಕೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದೂಗಳ ಈ ಮೌನ ಯಾತಕ್ಕಾಗಿ?’ಯಂತಹ ಪ್ರಚೋದನಕಾರಿ ಸಾಲುಗಳು ಸೇರಿವೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಏನಾದರೂ ಸಂಭವಿಸಬಹುದಾದ ಅಪಾಯದ ಮುನ್ಸೂಚನೆಯನ್ನು ನೀಡುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಇತ್ತೀಚೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಲಾಠಿಗಳೊಂದಿಗೆ ಮೆರವಣಿಗೆಗಳನ್ನು ನಡೆಸಿದೆ. ಚಿತ್ತಾಪುರದಂತಹ ಸಣ್ಣ ಪಟ್ಟಣದಲ್ಲಿ ದೊಡ್ಡ ಸಂಖ್ಯೆಯ ಜನರು ಲಾಠಿಗಳೊಂದಿಗೆ ಅಥವಾ ಇತರ ಆಯುಧಗಳೊಂದಿಗೆ ಬಂದರೆ, ಅದು ನಾಗರಿಕರಲ್ಲಿ ಭಯವನ್ನು ಉಂಟುಮಾಡುತ್ತದೆ, ಅನಗತ್ಯ ಸಾಮಾಜಿಕ ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.