ಸೇಡಂ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ನಿಮಿತ್ತ ನಿಗದಿಯಾಗಿದ್ದ ಪಥಸಂಚಲನ ತಾಲ್ಲೂಕು ದಂಡಾಧಿಕಾರಿ ಹೊರಡಿಸಿದ್ದ ‘ಅನುಮತಿ ನಿರಾಕರಣೆ’ ಆದೇಶ ಮೀರಿಯೂ ಭಾನುವಾರ ಆಕರ್ಷಕವಾಗಿ ನಡೆಯಿತು.
ಭಾನುವಾರ ನಿಗದಿಯಾಗಿದ್ದ ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಆರ್‌ಎಸ್‌ಎಸ್‌ನಿಂದ ಶನಿವಾರ ರಾತ್ರಿ ಮನವಿ ಸಲ್ಲಿಕೆಯಾಗಿತ್ತು. ‘ಪಥ ಸಂಚಲನದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು’ ಎಂಬ ಕಾರಣ ನೀಡಿ ಸೇಡಂ ತಾಲ್ಲೂಕು ದಂಡಾಧಿಕಾರಿ ಅನುಮತಿ ನಿರಾಕರಿಸಿ ಮನವಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆ ವಿಷಯ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಯಿತು.
ಅದಕ್ಕೂ ಮೊದಲೇ ಪಟ್ಟಣದ ನರ್ಮದಾ ಕಾಲೇಜು ಮೈದಾನದಲ್ಲಿ ಜಮಾಯಿಸಿದ್ದ ಗಣವೇಷಧಾರಿಗಳು ಸಂಜೆ 5 ಗಂಟೆ ಹೊತ್ತಿಗೆ ‘ಘೋಷ್’ ವಾದ್ಯಗಳೊಂದಿಗೆ ಭವ್ಯ ಪಥಸಂಚಲನ ಆರಂಭಗೊಂಡಿತು. ಗಣವೇಷಧಾರಿಗಳಿಗೆ ಮಹಿಳೆಯರು ಸಾರ್ವಜನಿಕರು ಪುಷ್ಪವೃಷ್ಟಿಗೈದು ಹುರಿದುಂಬಿಸಿದರು. ಪಥಸಂಚಲನವು ಡಿಬಿಆರ್ ಕಾಂಪೌಂಡ್ ಮೂಲಕ ತೆರಳುತ್ತಿದ್ದಂತೆಯೇ ಪೊಲೀಸರು ಗಣವೇಷಧಾರಿಗಳನ್ನು ತಡೆಯಲು ಮುಂದಾದರು. ಪೊಲೀಸರ ನಡೆಯನ್ನು ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ‘ಪಥಸಂಚಲನ ನಡೆಸಲು ಬಿಡಿ, ಇಲ್ಲದಿದ್ದರೆ ನಮ್ಮನ್ನು ಬಂಧಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣವೇಷ ಧರಿಸಿದ ತೇಲ್ಕೂರ
ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಗಣವೇಷ ಧರಿಸಿ ಪಥಸಂಚಲನದಲ್ಲಿ ಪುತ್ರನೊಂದಿಗೆ ಪಾಲ್ಗೊಂಡರು. ಗಣವೇಷಧಾರಿಗಳ ಬಂಧನದ ವೇಳೆ ಪೊಲೀಸರ ಕ್ರಮವನ್ನು ಖಂಡಿಸಿದರು. ಮುಖಂಡ ಶಿವಕುಮಾರ ಪಾಟೀಲ ತೆಲ್ಕೂರ ಪೊಲೀಸರ ನಡೆಗೆ ಖಂಡಿಸಿ ಭಾರತ ಮಾತೆಗೆ ಜೈಕಾರ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.