ADVERTISEMENT

ಕಲಬುರ್ಗಿ: ರಸಪ್ರಶ್ನೆ ಸ್ಪರ್ಧೆಯಲ್ಲಿ ಕುವೆಂಪು ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 10:21 IST
Last Updated 2 ಫೆಬ್ರುವರಿ 2020, 10:21 IST
ಕಲಬುರ್ಗಿಯಲ್ಲಿ ಶನಿವಾರ ಸಮ್ಮೇಳನದ ಮಹಿಳಾ ಸಮಿತಿಯಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಕಲಬುರ್ಗಿಯಲ್ಲಿ ಶನಿವಾರ ಸಮ್ಮೇಳನದ ಮಹಿಳಾ ಸಮಿತಿಯಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಕಲಬುರ್ಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮಹಿಳಾ ಸಮಿತಿಯಿಂದ ಶನಿವಾರ ಇಲ್ಲಿನ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವಿಭಾಗೀಯ ಕಚೇರಿಯಲ್ಲಿ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುವೆಂಪು ತಂಡ ಪ್ರಥಮ ಬಹುಮಾನ ಪಡೆಯಿತು.

ಪ್ರತಿ ತಂಡದಲ್ಲಿ 6 ಮಂದಿಯಂತೆ ಒಟ್ಟು 9 ತಂಡಗಳನ್ನು ರಚಿಸಿ, ಪ್ರತಿ ತಂಡಕ್ಕೆ 10 ಪ್ರಶ್ನೆಗಳನ್ನು ಕೇಳಲಾಯಿತು.ಇದರಲ್ಲಿ ಹೆಚ್ಚಿನ ಅಂಕ ಗಳಿಸಿದ ಕುವೆಂಪು ತಂಡದಲ್ಲಿದ್ದ ಮಹಾನಂದಾ, ಕಲ್ಪೇಶ, ಪಲ್ಲವಿ, ನಿಂಗಮ್ಮ, ಕವಿಗ್ರಿ, ಭಾಗ್ಯಶ್ರೀ ಪ್ರಥಮ ಬಹುಮಾನ ಪಡೆದರು.

ದ್ವಿತೀಯ ಬಹುಮಾನವನ್ನು ಗಿರೀಶ್ ಕಾರ್ನಾಡ್‌ ತಂಡದಲ್ಲಿದ್ದ ಶಿವಕುಮಾರ, ಶಾಂತಮ್ಮ, ಜ್ಯೋತಿ, ಶ್ರುತಿ, ಬಸವರಾಜ, ಜ್ಯೋತಿ ಪಡೆದರು. ತೃತೀಯ ಬಹುಮಾನ ಶಿವರಾಮ ಕಾರಂತ್ ತಂಡದ ಸದಸ್ಯರಾದ ಗಂಗೂಬಾಯಿ, ರಾಠೋಡ, ಲಕ್ಷ್ಮಿ, ಭಾಗ್ಯಶ್ರೀ, ಸುರೇಖಾ, ಸತೀಶಕುಮಾರ ಅವರಿಗೆ ಲಭಿಸಿತು. ಈ ಮೂರು ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ADVERTISEMENT

ಕಲಬುರ್ಗಿ ಎಪಿಎಂಸಿ ಕಾರ್ಯದರ್ಶಿ, ಮಹಿಳಾ ಸಮಿತಿಯ ಕಾರ್ಯಧ್ಯಕ್ಷರಾದ ಶೈಲಜಾ ಅವರ ಅಧ್ಯಕ್ಷತೆಯಲ್ಲಿ ರಸಪ್ರಶ್ನೆ ನಡೆಯಿತು.ತೀರ್ಪುಗಾರರಾಗಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಜಕುಮಾರ ಕೌಡಾಳ ಕಾರ್ಯನಿರ್ವಹಿಸಿದರು.ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಓಂಕಾರೇಶ್ವರಿ, ಕೃಷಿ ಮಾರಾಟ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ, ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಪಾರ್ವತಿ ರೆಡ್ಡಿ, ಸಿಡಿಪಿಒ ತಿಪ್ಪಣ್ಣ ಸಿರಸಗಿ, ಡಾ.ವಿಜಯಲಕ್ಷ್ಮಿ ಕೋಸಗಿ, ರೇಣುಕಾ ಡಾಂಗೆ, ಅರುಣಾ ಹಳ್ಳಿಖೇಡ, ಕವಿತಾ ಪಾಟೀಲ, ಡಾ.ವಿಜಯಲಕ್ಷ್ಮೀ ಕೋಸಗಿ ಇದ್ದರು.

ಪ್ರತಿ ತಂಡಕ್ಕೂ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಇಟ್ಟಿದ್ದು ವಿಶೇಷವಾಗಿತ್ತು. ಕೊನೆಯಲ್ಲಿ ಬಾರಿಸು ಕನ್ನಡ ಡಿಂಡಿಮವಾ, ಓ ಕರ್ನಾಟಕ ಹೃದಯಶಿವಾ ಹಾಡನ್ನು ಇಡೀ ತಂಡದವರು ಸುಶ್ರಾವ್ಯವಾಗಿ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.