ADVERTISEMENT

ಕಲಬುರ್ಗಿ: ರಂಗಮಂದಿರದಿಂದಲೇ ಸಮ್ಮೇಳನದ ಮೆರವಣಿಗೆ

ಗೊಂದಲಗಳಿಗೆ ತೆರೆ ಎಳೆದ ಜಿಲ್ಲಾಧಿಕಾರಿ, ಪೊಲೀಸ್‌ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:04 IST
Last Updated 3 ಫೆಬ್ರುವರಿ 2020, 13:04 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮ್ಮೇಳನಕ್ಕಾಗಿ ತಯಾರಿಸಲಾಗುತ್ತಿರುವ ವಿವಿಧ ಬಗೆಯ ತಿನಿಸುಗಳ ತಯಾರಿಕೆಯನ್ನು ಜಿಲ್ಲಾಧಿಕಾರಿ ಶರತ್ ಬಿ. ಭಾನುವಾರ ಪರಿಶೀಲಿಸಿದರು. ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ, ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರವೀಣಪ್ರಿಯಾ ಡೇವಿಡ್‌ ಇದ್ದರು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮ್ಮೇಳನಕ್ಕಾಗಿ ತಯಾರಿಸಲಾಗುತ್ತಿರುವ ವಿವಿಧ ಬಗೆಯ ತಿನಿಸುಗಳ ತಯಾರಿಕೆಯನ್ನು ಜಿಲ್ಲಾಧಿಕಾರಿ ಶರತ್ ಬಿ. ಭಾನುವಾರ ಪರಿಶೀಲಿಸಿದರು. ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ, ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರವೀಣಪ್ರಿಯಾ ಡೇವಿಡ್‌ ಇದ್ದರು   

ಕಲಬುರ್ಗಿ: ಸಾಹಿತ್ಯಾಸಕ್ತರ ಬೇಡಿಕೆಯ ಹಿನ್ನೆಲೆಯಲ್ಲಿ ಫೆ 5ರಂದು ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಚಂದ್ರಕಾಂತ ಪಾಟೀಲ ಶಾಲೆಯ ಬದಲು ರಂಗಮಂದಿರದಿಂದಲೇ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹಾಗೂ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಸ್ಪಷ್ಟಪಡಿಸುವ ಮೂಲಕ ಹಲವು ದಿನಗಳಿಂದ ಇದ್ದ ಗೊಂದಲಗಳಿಗೆ ತೆರೆ ಎಳೆದರು.

ಸಮ್ಮೇಳನ ನಡೆಯಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಹಾಗೂ ಕಮಿಷನರ್‌, ‘ಮಕ್ಕಳು ಸುಮಾರು ಆರು ಕಿ.ಮೀ. ದೂರವನ್ನು ಕ್ರಮಿಸುವುದು ಅಸಾಧ್ಯ ಎಂಬ ಕಾರಣಕ್ಕಾಗಿ ಈ ನಿರ್ಧಾರವನ್ನು ಮೆರವಣಿಗೆ ಸಮಿತಿ ಕೈಗೊಂಡಿತ್ತು. ಆದರೆ, ನಗರದ ಮಧ್ಯ ಭಾಗದಿಂದಲೇ ಮೆರವಣಿಗೆ ಆರಂಭವಾಗಬೇಕು ಎಂಬ ಒತ್ತಡ ಹೆಚ್ಚಾಗಿದ್ದರಿಂದ ಎಸ್‌.ಎಂ.ಪಂಡಿತ ರಂಗಮಂದಿರದಿಂದಲೇ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಸಮಿತಿಯೂ ಮೊದಲಿಗೆ ಇದೇ ಅಭಿಪ್ರಾಯವನ್ನು ಹೊಂದಿತ್ತು’ ಎಂದರು.

ಜಿಲ್ಲಾಧಿಕಾರಿ ಶರತ್‌ ಮಾತನಾಡಿ, ‘ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ 113 ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. 60 ಹೋಟೆಲ್‌, 17 ಶಾಲೆಗಳು, 10 ಕಲ್ಯಾಣ ಮಂಟಪಗಳು, 12 ವಸತಿ ನಿಲಯಗಳು, 9 ಅತಿಥಿ ಗೃಹಗಳು, 5 ಸರ್ಕಾರಿ ವಸತಿಗೃಹಗಳಲ್ಲಿ ಗಣ್ಯರು, ಅತಿಥಿಗಳು ಹಾಗೂ ಪ್ರತಿನಿಧಿಗಳು ವಾಸ್ತವ್ಯ ಹೂಡಲಿದ್ದಾರೆ’ ಎಂದು ಹೇಳಿದರು.

ADVERTISEMENT

ಸಮ್ಮೇಳನದ ಮೆರವಣಿಗೆ ಹಾಯ್ದು ಹೋಗುವ ದ್ವಾರವೊಂದಕ್ಕೆ ವೈಜನಾಥ ಪಾಟೀಲ ಅವರ ಹೆಸರನ್ನು ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೊಲೀಸ್‌ ಕಮಿಷನರ್ ಎಂ.ಎನ್‌.ನಾಗರಾಜ ಮಾತನಾಡಿ, ‘ಸಮ್ಮೇಳನಕ್ಕೆ 4 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ನಾಲ್ವರು ಎಸ್ಪಿಗಳು, 14 ಜನ ಎಸಿಪಿಗಳು, 75 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು, 10 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ 4 ಸಾವಿರ ಪೊಲೀಸರು ಹಾಗೂ 500 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂಚಾರ ಪೊಲೀಸರನ್ನು ಬೇರೆ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗುತ್ತಿದೆ. ಮೆರವಣಿಗೆ ಸಾಗುವ ಮಾರ್ಗ ಹಾಗೂ ಸಮ್ಮೇಳನ ನಡೆಯಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಹಾಗೂ ಡ್ರೋಣ್‌ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.