ADVERTISEMENT

ಕಲಬುರಗಿ | ಮರಳು ಅಕ್ರಮ ಸಾಗಾಣಿಕೆ: ಪಿಎಸ್‌ಐ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 15:24 IST
Last Updated 17 ಜೂನ್ 2023, 15:24 IST
ಕಲಬುರಗಿ ಎಸ್ಪಿ ಇಶಾ ಪಂತ್ ಯಡ್ರಾಮಿ ಪಿಎಸ್ಐ ಬಸವರಾಜ ‌ಚಿತಕೋಟೆ ಅವರ ಆರೋಗ್ಯ ವಿಚಾರಿಸಿದರು
ಕಲಬುರಗಿ ಎಸ್ಪಿ ಇಶಾ ಪಂತ್ ಯಡ್ರಾಮಿ ಪಿಎಸ್ಐ ಬಸವರಾಜ ‌ಚಿತಕೋಟೆ ಅವರ ಆರೋಗ್ಯ ವಿಚಾರಿಸಿದರು   

ಕಲಬುರಗಿ: ಜೇವರ್ಗಿಯ ಹುಲ್ಲೂ‌ರು ಗ್ರಾಮದ ಬಳಿ ಮರಳು ಅಕ್ರಮ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಮಾಲೀಕ, ರೌಡಿ ಶೀಟರ್ ಸಾಯಿಬಣ್ಣ ಕರ್ಜಗಿಯನ್ನು ಕರೆತರುವ ವೇಳೆ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಪೊಲೀಸರು ಶನಿವಾರ ಗುಂಡು ಹಾರಿಸಿ ಬಂಧಿಸಿದ್ದಾರೆ.

ಗಾಯಗೊಂಡ ಸಾಯಿಬಣ್ಣನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಯಬಣ್ಣನಿಂದ ದಾಳಿಗೊಳಗಾದ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಲ್ಲೂರು ಗ್ರಾಮದ ಬಳಿ ಗುರುವಾರ ರಾತ್ರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ತಡೆಯಲು ಮುಂದಾದ ನೆಲೋಗಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಮಯೂರ ಚವ್ಹಾಣ ಅವರ ಮೇಲೆ ಚಾಲಕ ಸಿದ್ದಣ್ಣ ಕರ್ಜಗಿ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿದ್ದ. ಈ ಟ್ರ್ಯಾಕ್ಟರ್ ಸಾಯಿಬಣ್ಣನ ಹೆಸರಿನಲ್ಲಿತ್ತು. ಹೀಗಾಗಿ, ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಶನಿವಾರ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಿಂದ ಬಂಧಿಸಿ ಕರೆತರುತ್ತಿದ್ದರು.

ADVERTISEMENT

ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟೆ, ಜೇವರ್ಗಿ ಪಿಎಸ್‌ಐ ಸಂಗಮೇಶ ಅಂಗಡಿ ಹಾಗೂ ಎಎಸ್‌ಐ ಗುರುಬಸಪ್ಪ ಆರೋಪಿಯನ್ನು ವಾಹನದಲ್ಲಿ ಕರೆ ತರುವ ವೇಳೆಯಲ್ಲಿ ಮಾರ್ಗ ಮಧ್ಯೆ ನಿಸರ್ಗ ಕರೆಗೆ ಇಳಿದಿದ್ದ ಸಾಯಿಬಣ್ಣ ಚಾಕುವಿನಿಂದ ಏಕಾಏಕಿ ಪಿಎಸ್‌ಐ ಬಸವರಾಜ ಚಿತಕೋಟೆ ಮೇಲೆ ಹಲ್ಲೆ ಮಾಡಿದ್ದಾರೆ. ಕೈಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗುವ ವೇಳೆಯಲ್ಲಿ ವಾಹನದಲ್ಲೇ ಇದ್ದ ಇನ್ನೊಬ್ಬ ಪಿಎಸ್‌ಐ ಸಂಗಮೇಶ ಸರ್ವಿಸ್ ರಿವಾಲ್ವರ್‌ನಿಂದ ಒಂದು ಸುತ್ತು ಕಾಲಿಗೆ ಗುಂಡು ಹಾರಿಸಿ ಹಿಡಿದರು.

ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಾಯಿಬಣ್ಣ ವಿರುದ್ಧ ಜೇವರ್ಗಿ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ.

ಓದಿ... ಕಲಬುರಗಿ: ಮರಳು ತುಂಬಿದ ಟ್ರ್ಯಾಕ್ಟರ್ ಹಾಯಿಸಿ ಕಾನ್‌ಸ್ಟೆಬಲ್ ಕೊಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.