ಕಲಬುರಗಿ: ‘ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ 30 ರಷ್ಟು ಕಮಿಷನ್ ನೀಡಬೇಕಿದೆ ಎಂದು ಆರೋಪಿಸಿರುವ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪದಲ್ಲಿ ಸತ್ಯವಿಲ್ಲ. ಇಂತಹ ಆರೋಪ ಅವರಿಗೆ ಶೋಭೆ ತರುವುದಿಲ್ಲ’ ಎಂದು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ, ಸರ್ಕಾರದಿಂದ ಈ ಭಾಗದ ಮಠಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಆಗಲೂ ಕಮಿಷನ್ ನೀಡಿಲ್ಲ, ಈಗಿನ ಸರ್ಕಾರದಲ್ಲೂ ನೀಡುತ್ತಿಲ್ಲ’ ಎಂದು ಹೇಳಿದರು.
‘ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಮುನ್ನ ಲಿಂಗಾಯತ ಸಮುದಾಯದ ಹಾಗೂ ಉತ್ತರ ಕರ್ನಾಟಕ ಭಾಗದವರನ್ನು ಮುಖ್ಯಮಂತ್ರಿ ಮಾಡುವಂತೆ ಬಿಜೆಪಿ ನಾಯಕರಿಗೆ ಮಠಾಧೀಶರು ಒತ್ತಾಯಿಸಿದ್ದೆವು. ನಮ್ಮ ಬೇಡಿಕೆಯಂತೆ ಬಸವರಾಜ ಬೊಮ್ಮಾಯಿ ಅವರನ್ನುಮುಖ್ಯಮಂತ್ರಿ ಮಾಡಲಾಗಿದೆ. ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ‘ಕಲ್ಯಾಣ ಕರ್ನಾಟಕ ಮಠಾಧೀಶರ ಸಂಘ’ದ ಬೆಂಬಲ ಅವರಿಗಿದೆ’ ಎಂದರು.
‘ಸ್ವಾಮೀಜಿಗಳು ಸೂಜಿಯಾಗಬೇಕು, ಕತ್ತರಿಯಾಗಬಾರದು. ನಮ್ಮಿಂದ ಯಾವುದೇ ಕಮಿಷನ್ ಕೇಳಿಲ್ಲ, ಮಧ್ಯವರ್ತಿಗಳಿಂದ ಏನಾದರು ತಪ್ಪಾಗಿರಬಹುದು’ ಎಂದು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ರೇವೂರಗೆ ಸಚಿವ ಸ್ಥಾನ ನೀಡಿ:
‘ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಿಂದ ಈ ಭಾಗದಲ್ಲಿ ಬಿಜೆಪಿ ಪಕ್ಷಕ್ಕೂ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
‘ರೇವೂರ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ತಂದೆ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಅಂಶಗಳನ್ನೂ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.