ADVERTISEMENT

ಗ್ರಾಹಕ ಸಂಪರ್ಕ: ಮೊದಲ ದಿನವೇ ಭರ್ಜರಿ ಯಶಸ್ಸು

ಎಸ್‌ಬಿಐ ನೇತೃತ್ವದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಭಾಗಿ, ಶುಕ್ರವಾರವೂ ಸಾಲ– ಸೇವಾ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 12:24 IST
Last Updated 25 ಅಕ್ಟೋಬರ್ 2019, 12:24 IST
   

ಕಲಬುರ್ಗಿ: ಗ್ರಾಹಕರಿಗೆ ನೇರ ಸಾಲ ವಿತರಣೆ ಹಾಗೂ ಕುಂದು ಕೊರತೆಗಳ ನಿವಾರಣೆಗಾಗಿ ಎಸ್‌ಬಿಐ ನೇತೃತ್ವಲ್ಲಿ ಆಯೋಜಿಸಿದ ಎರಡು ದಿನಗಳ ಗ್ರಾಹಕರ ಸಂಪರ್ಕ ಅಭಿಯಾನಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ಚಾಲನೆ ನೀಡಲಾದ ಈ ಆಂದೋಲನಕ್ಕೆ ಗ್ರಾಹಕರು ಸಾಗರೋಪಾದಿಯಲ್ಲಿ ಹರಿದುಬಂದರು. ಎಸ್‌ಬಿಐ ಹಾಗೂ ಅದರ ವಿಲೀನ ಬ್ಯಾಂಕ್‌ ಶಾಖೆಗಳೂ ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳೂ ಇದರಲ್ಲಿ ಪಾಲ್ಗೊಂಡವು. ವಿವಿಧ ಬ್ಯಾಂಕ್‌ಗಳ ಗ್ರಾಹಕರಿಗೆ ಒಂದೇ ಸೂರಿನಡಿ ಸಾಲ– ಸವಲತ್ತು ಸಿಕ್ಕಿದ್ದರಿಂದ ಈ ಪ್ರಯೋಗ ಹೆಚ್ಚು ಫಲಪ್ರದವಾಯಿತು. ಇಷ್ಟು ದಿನ ಸಾಲಕ್ಕಾಗಿ, ಸಮಸ್ಯೆಗಳ ನಿವಾರಣೆಗಾಗಿ ಜನರೇ ಬ್ಯಾಂಕಿಗೆ ಅಲೆಯುತ್ತಿದ್ದರು. ಆದರೆ, ಮೊದಲ ಬಾರಿಗೆ ಬ್ಯಾಂಕುಗಳೇ ಕಚೇರಿಯಿಂದ ಆಚೆಗೆ ಬಂದು ಗ್ರಾಹಕರ ಬಳಿ ಬಂದಿದ್ದಕ್ಕೆ ಜನ ಇನ್ನಿಲ್ಲದಂತೆ ಖುಷಿ ವ್ಯಕ್ತಪಡಿಸಿದರು.

ಕೇಂದ್ರ ಹಣಕಾಸು ಇಲಾಖೆ ಸೂಚನೆಯ ಮೇರೆಗೆ ಈ ಆಂದೋಲನ ಆಯೋಜಿಸಲಾಗಿದೆ. ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್‌, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್, ಐಡಿಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್, ಅಲಹಾಬಾದ್‌ ಬ್ಯಾಂಕ್, ಆಂಧ್ರ ಬ್ಯಾಂಕ್‌, ಪಂಜಾಬ್ ಬ್ಯಾಂಕ್, ಕೆಜಿಬಿ ಸೇರಿದಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಸ್ಥಳದಲ್ಲಿ ಇದ್ದರು. ಮಾತ್ರವಲ್ಲ; ಕೃಷಿ, ಕೈಗಾರಿಕೆ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಕೂಡ ಮಳಿಗೆಗಳನ್ನು ತೆರೆದು, ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು.

ADVERTISEMENT

ವಿವಿಧ ಯೋಜನೆಗಳ ಫಲಾನುಭವಿಗಳು, ಸಾಲ ಮಂಜೂರಾತಿ, ಮರುಪಾವತಿ, ಚೆಕ್‌ಬೌನ್ಸ್‌, ವಿಮೆ, ಭೀಮ್‌ ಆ್ಯಪ್‌ ಸಮಸ್ಯೆ, ನೆಟ್‌ ಬ್ಯಾಂಕಿಂಗ್‌, ರೈತರು, ವೃದ್ಧರು, ವಿಧವೆಯರ ಪಿಂಚಣಿಯಲ್ಲಿ ಇರುವ ಸಮಸ್ಯೆಗಳ ನಿವಾರಣೆ, ಹೊಸ ಅಕೌಂಟ್‌ ತೆರೆಯುವುದು, ಅಕೌಂಟ್‌ಗಳ ವರ್ಗಾವಣೆ ಸೇರಿದಂತೆ ಬಹುಪಾಲು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ಸಾಲ ಮಂಜೂರಾದ ಹಲವರಿಗೆ ಅಲ್ಲಿಯೇ ಪ್ರಮಾಣ ಪತ್ರವನ್ನೂ ನೀಡಲಾಯಿತು.

ಜಿಲ್ಲಾಧಿಕಾರಿ ಬಿ. ಶರತ್ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಎಸ್.ಮುರಳೀಧರ ರಾವ್, ಉಪ ಪ್ರಧಾನ ವ್ಯವಸ್ಥಾಪಕ ವಿ.ಆಬೀದ್ ಹುಸೇನ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೀಂದ್ರನಾಥ ಸೂಗೂರ, ಬ್ಯಾಂಕ್ ಆಫ್ ಬರೋಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಅವುಡಿಯಪ್ಪನ್, ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ, ಕರಿನಾಟಕ ಗ್ರಾಮೀಣ ಬ್ಯಾಂಕ್, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ ಭಟ್, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಿ.ಎಚ್.ಹವಲ್ದಾರ್, ಎಸ್‌ಬಿಐ ಪ್ರಾದೇಶಿಕ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಕಾಶ, ಸಹಾಯಕ ಪ್ರಧಾನ ವ್ಯವಸ್ಥಾಪಕ ಹಣಮಂತರಾಯ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.