ADVERTISEMENT

₹ 637 ಕೋಟಿ ಪೈಕಿ ₹ 379 ಕೋಟಿ ಮಾತ್ರ ಬಳಕೆ!

ವಿಧಾನಮಂಡಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಬೇಸರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 13:56 IST
Last Updated 19 ಡಿಸೆಂಬರ್ 2019, 13:56 IST
ಕರ್ನಾಟಕ ವಿಧಾನಮಂಡಲದ ಸಮಿತಿ ಗಂಡೋರಿ ನಾಲಾ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆ ಮಾಡಿತು. ಸಮಿತಿ ಅಧ್ಯಕ್ಷ ಅಂಗಾರ, ವಿಧಾನಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಇದ್ದರು
ಕರ್ನಾಟಕ ವಿಧಾನಮಂಡಲದ ಸಮಿತಿ ಗಂಡೋರಿ ನಾಲಾ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆ ಮಾಡಿತು. ಸಮಿತಿ ಅಧ್ಯಕ್ಷ ಅಂಗಾರ, ವಿಧಾನಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಇದ್ದರು   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ₹ 637 ಕೋಟಿ ಬಿಡುಗಡೆ ಮಾಡಿದೆ. ಆದರೆ, ಕೇವಲ ₹ 379 ಕೋಟಿಯನ್ನು ಮಾತ್ರ ಬಳಕೆ ಮಾಡಿದೆ ಎಂದು ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟರಿಗಾಗಿ ಮೀಸಲಿಟ್ಟ ಹಣ ಪೂರ್ತಿಯಾಗಿ ಖರ್ಚು ಮಾಡಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ ಇಲ್ಲಿ ಬಿಡುಗಡೆಯಾದ ಹಣವೇ ಖರ್ಚಾಗುತ್ತಿಲ್ಲ. ಈ ಬಗ್ಗೆ ಮಂಡಳಿ ಕಾರ್ಯದರ್ಶಿ ಅವರನ್ನು ಪ್ರಶ್ನಿಸಿದಾಗ ಹಣವನ್ನು ವಿನಿಯೋಜನೆ ಮಾಡಲು ಕ್ರಿಯಾ ಯೋಜನೆಗಳನ್ನು ಸಲ್ಲಿಸಬೇಕು. ಅದಕ್ಕೆ ಅಧಿಕಾರಿಗಳ ಕೊರತೆ ಇದೆ. ಶೇ 40ರಷ್ಟು ಅಧಿಕಾರಿಗಳ ಕೊರತೆ ಇರುವುದರಿಂದ ಹಣ ವಿನಿಯೋಗ ಸಮರ್ಪಕವಾಗಿಲ್ಲ ಎಂದು ತಿಳಿಸಿದ್ದಾರೆ. ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಸಮಿತಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಿದೆ ಎಂದರು.

ನಿರಾಶ್ರಿತರಿಗೆ 40x60 ನಿವೇಶನ ಕೊಡಿ: ಬೆಣ್ಣೆತೊರಾ ಹಾಗೂ ಗಂಡೋರಿ ನಾಲಾ ಯೋಜನೆಗಳಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ 33x33 ಅಳತೆಯ ನಿವೇಶನ ಕೊಡುತ್ತಿರುವುದಕ್ಕೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು. ಯೋಜನೆಗಾಗಿ ಎಲ್ಲವನ್ನೂ ಕಳೆದುಕೊಂಡವರಿಗೆ ದೊಡ್ಡ ನಿವೇಶನ ಕೊಡದಿದ್ದರೆ ಹೇಗೆ? ಅಗತ್ಯ ಬಿದ್ದರೆ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿ ಎಂದು ಸಮಿತಿ ಸದಸ್ಯ, ಮಾಜಿ ಸಚಿವ ಎನ್‌.ಮಹೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಿತಿ ಅಧ್ಯಕ್ಷ ಅಂಗಾರ, ‘ಇದು ತುರ್ತಾಗಿ ಆಗಬೇಕಾದ ಕೆಲಸ. ಮುಖ್ಯಮಂತ್ರಿ ಅವರಿಗೆ ಈ ಸಂಬಂಧ ಸಮಿತಿ ಶಿಫಾರಸು ಮಾಡಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರೂ, ಶಾಸಕರಾದ ಬಸವರಾಜ ಮತ್ತಿಮೂಡ, ಬಸನಗೌಡ ದದ್ದಲ್, ಎಚ್.ಕೆ.ಕುಮಾರಸ್ವಾಮಿ, ಡಾ.ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್‌ ಸದಸ್ಯರಾದ ಕೆ.ಎ.ತಿಪ್ಪೆಸ್ವಾಮಿ, ಆರ್.ಪ್ರಸನ್ನಕುಮಾರ, ತಿಪ್ಪಣ್ಣ ಕಮಕನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.