ಕಲಬುರಗಿ: ‘ಮುಡಾ ಹಗರಣದಂತೆ ಕಲಬುರಗಿಯಲ್ಲಿಯೂ 19 ಎಕರೆ ಆಸ್ತಿ ಕಬಳಿಕೆಯಾಗಿದೆ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಬಲವಾಗಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ತಾಲ್ಲೂಕಿನ ಕುಸನೂರ ಗ್ರಾಮದ ಸರ್ವೇ ನಂ 88/1 ಜಮೀನು ಕಾನೂನು ಬಾಹಿರವಾಗಿ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ಶಾಸ್ತ್ರದ ಸಂಸ್ಥೆ ಹೆಸರಿನಲ್ಲಿ ಖರ್ಗೆ ಕುಟುಂಬ ತಮ್ಮ ಅಧಿಕಾರ ದುರುಪಯೋಗಿಸಿಕೊಂಡು ಕೋಟ್ಯಂತರ ರೂಪಾಯಿ ಬೆಲೆಬಾಳುವ ಗುಲಬರ್ಗಾ ವಿಶ್ವವಿದ್ಯಾಲಯ ಸಂಶೋಧನಾ ಜಮೀನು ಕಬಳಿಸಿದೆ’ ಎಂದರು.
‘ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆ ಎನ್ನುವ ಹೆಸರಿನಲ್ಲಿ ಸರ್ಕಾರದಿಂದ ₹ 10 ಕೋಟಿ ಅನುದಾನ ಪಡೆದು ಕಟ್ಟಡ ನಿರ್ಮಿಸಲಾಗಿದೆ. ಆದರೆ, 10 ವರ್ಷವಾದರೂ ಪ್ರಾರಂಭಿಸದೆ ಅದಕ್ಕೆ ಬೀಗ ಹಾಕಿದ್ದಾರೆ’ ಎಂದು ಆಪಾದಿಸಿದರು.
‘19 ಎಕರೆ ಜಮೀನಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಂಶೋಧನಾ ಕಟ್ಟಡ ನಿರ್ಮಿಸಿಲ್ಲ. ಆಗ ಈ ಸರ್ಕಾರಿ ಜಮೀನು ಗುಳುಂ ಮಾಡಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಕಳೆದ 15.5.2014ರಂದು 30 ವರ್ಷಗಳ ಕಾಲಾವಧಿಗೆ ಪಾಲಿ ಸಂಸ್ಕೃತಿ ಭಾಷೆ ಸಂಶೋಧನಾ ಕೇಂದ್ರ ನಡೆಸಲು ಉಪನೋಂದಣಿ ಕಚೇರಿಯಲ್ಲಿ ಲೀಸ್ ಮಾಡಿಕೊಂಡಿತ್ತು. ಆದರೆ, ಲೀಸ್ ಮೊತ್ತ ₹ 66.94 ಲಕ್ಷ ಭರಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿ ಕಾನೂನು ಬಾಹಿರವಾಗಿ ಟ್ರಸ್ಟ್ ಕಾರ್ಯದರ್ಶಿ ರಾಧಾಕೃಷ್ಣ ದೊಡ್ಡಮನಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಿ ಜಮೀನು ಉಚಿತವಾಗಿ ಪಡೆದುಕೊಂಡಿದ್ದಾರೆ’ ಎಂದು ವಿವರಿಸಿದರು.
‘ಖರ್ಗೆ ಕುಟುಂಬ ನಿರ್ಮಿಸಿರುವ ಪಾಲಿ ಸಂಸ್ಕೃತ ಭಾಷೆ ಸಂಶೋಧನಾ ಕೇಂದ್ರದಲ್ಲಿ ಒಬ್ಬರೂ ವಿದ್ಯಾರ್ಥಿಗಳಿಲ್ಲ ಮತ್ತು ಅದು ಬಂದ್ ಮಾಡಿ ಸುಮಾರು ₹ 100 ಕೋಟಿಗೂ ಅಧಿಕ ಮೌಲ್ಯದ ಜಮೀನು ಕಬಳಿಸಿದ್ದು, ಕೂಡಲೇ ಖರ್ಗೆ ಕುಟುಂಬ ಈ ಹಗರಣದ ಬಗ್ಗೆ ಸ್ಪಷ್ಟಿಕರಣ ಕೊಡಬೇಕು’ ಎಂದು ಒತ್ತಾಯಿಸಿದರು.
‘ಯಾವುದೇ ಚಟುವಟಿಕೆ ನಡೆಸದೆ ಇರುವುದರಿಂದ ಉಚಿತವಾಗಿ ನೀಡಿರುವ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಹಿಂಪಡೆಯಬೇಕು. ಈ ಕುರಿತು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಳೆದ 25.07.2022ರಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರೂ ಇದುವರೆಗೂ ಯಾವುದೇ ಕ್ರಮವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಆ.2ರಂದು ರಾಜ್ಯದಾದ್ಯಂತ ಶ್ರೀರಾಮ ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಮೋದ ಮುತಾಲಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ, ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಯಾದಗಿರಿ ಜಿಲ್ಲಾಧ್ಯಕ್ಷ ಸಂದೀಪ, ಶಶಾಂತ್, ರಿತೀಶಕುಮಾರ್ ಇತರರಿದ್ದರು.
‘ಕೋರ್ಟ್ ಆದೇಶ ಉಲ್ಲಂಘನೆ’
‘ನಗರದ ಬಹಮನಿ ಕೋಟೆಯಲ್ಲಿಯೂ 300ಕ್ಕೂ ಅಧಿಕ ಮುಸ್ಲಿಮರು ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸುವಂತೆ ಕಳೆದ 6 ತಿಂಗಳ ಹಿಂದೆಯೇ ಕಲಬುರಗಿ ಹೈಕೋರ್ಟ್ ಪೀಠ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆದರೆ ಇದುವರೆಗೂ ಅವುಗಳ ತೆರವು ಕಾರ್ಯಾಚರಣೆ ನಡೆದಿಲ್ಲ. ನಗರದ ಶೇಖ್ ರೋಜಾದ ಸರ್ಕಾರಿ ಜಮೀನು ಅತಿಕ್ರಮಣವಾಗಿದೆ. ಹೀಗೆ ನಗರದ ವಿವಿಧೆಡೆ ಸರ್ಕಾರಿ ಜಮೀನು ಅತಿಕ್ರಮಣವಾದರೂ ಯಾವುದೇ ಕ್ರಮಕೈಕೊಳ್ಳದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯವರು ನಮ್ಮ ಸಿದ್ಧಲಿಂಗ ಸ್ವಾಮೀಜಿಯವರು ನಗರದಲ್ಲಿ ಆಂದೋಲಾ ಶಾಖಾ ಮಠ ಸ್ಥಾಪನೆಗೆ ಕಟ್ಟಡಕ್ಕೆ ಅನುಮತಿ ರದ್ದು ಪಡಿಸಿದ್ದಾರೆ. ಇದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.