ADVERTISEMENT

‘ಸಂಸ್ಕಾರಯುತ ಶಿಕ್ಷಣದಿಂದ ಸಾಮಾಜಿಕ ಸಾಮರಸ್ಯ’

ಸಾಂದೀಪನಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:05 IST
Last Updated 21 ಅಕ್ಟೋಬರ್ 2024, 16:05 IST
ಕಲಬುರಗಿಯ ನಾರಾಯಣಪ್ಪ ಮಾದಮ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸಾಂದೀಪನಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಭೂಮಿ ಪೂಜೆ ನಂತರ ನಡೆದ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ (ಕೇಂದ್ರ ಅಯೋಧ್ಯ) ಗೋಪಾಲ್ ಜಿ. ಮಾತನಾಡಿದರು. ಸದಾಶಿವ ಸ್ವಾಮೀಜಿ, ಕಾರ್ಯದರ್ಶಿ ಶಿವಕುಮಾರ್, ಲಿಂಗರಾಜಪ್ಪ ಅಪ್ಪ ಇತರರು ಹಾಜರಿದ್ದರು
ಕಲಬುರಗಿಯ ನಾರಾಯಣಪ್ಪ ಮಾದಮ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸಾಂದೀಪನಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಭೂಮಿ ಪೂಜೆ ನಂತರ ನಡೆದ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ (ಕೇಂದ್ರ ಅಯೋಧ್ಯ) ಗೋಪಾಲ್ ಜಿ. ಮಾತನಾಡಿದರು. ಸದಾಶಿವ ಸ್ವಾಮೀಜಿ, ಕಾರ್ಯದರ್ಶಿ ಶಿವಕುಮಾರ್, ಲಿಂಗರಾಜಪ್ಪ ಅಪ್ಪ ಇತರರು ಹಾಜರಿದ್ದರು   

ಕಲ್ಬುರ್ಗಿ: ಸಾಮಾಜಿಕ ಸಾಮರಸ್ಯ ಬೆಳೆಸಲು ವಿಶ್ವ ಹಿಂದೂ ಪರಿಷತ್ 60 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ (ಕೇಂದ್ರ ಅಯೋಧ್ಯ) ಗೋಪಾಲ್ ಜಿ. ಹೇಳಿದರು.

ನಗರದಲ್ಲಿ ವಿಶ್ವ ಹಿಂದೂ ಪರಿಷತ್ತು ಉತ್ತರ ಕರ್ನಾಟಕ ಟ್ರಸ್ಟ್ ಹಾಗೂ ನಾರಾಯಣಪ್ಪ ಮಾದಮ ಶೆಟ್ಟಿ ಸ್ಮಾರಕದ ಆಶ್ರಯದಲ್ಲಿ ಸಾಂದೀಪನಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

‘ಸುಸಜ್ಜಿತ ಕಟ್ಟಡವಿದ್ದರೆ ಉತ್ತಮ ಶಿಕ್ಷಣ ಸಿಗುವುದಿಲ್ಲ. ಸಂಸ್ಕಾರಯುತ ಮೌಲ್ಯ ಮುಖ್ಯ ಗುರಿಯಾಗಬೇಕು. ಜಾತಿ ತೊಲಗಿ ಸಮಸ್ತರು ಒಗ್ಗೂಡಿ ಬಲಿಷ್ಠ ಹಿಂದೂ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಹೆಜ್ಜೆ ಹಾಕಬೇಕಾಗಿದೆ’ ಎಂದರು.

ADVERTISEMENT

ಅಡಿಗಲ್ಲು ನೆರವೇರಿಸಿದ ಸೇಡಂ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿರುವ ಭರಾಟೆಯ ನಡುವೆ ಕನ್ನಡದಲ್ಲಿ ಶಿಕ್ಷಣ ನೀಡುವ ಮೂಲಕ ಸಾಂದೀಪನಿ ಶಾಲೆಯು ಉತ್ತಮ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶ್ರೀನಿವಾಸ ಸರಡಗಿಯ ಅಪ್ಪರಾವ್ ದೇವಿ ಮುತ್ಯಾ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ವಿಶ್ವ ಹಿಂದೂ ಪರಿಷತ್ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಬ್ರಹ್ಮಪುರ ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿದರು. ನೂತನ ಕಟ್ಟಡಕ್ಕೆ ನೆರವಾದ ದಾನಿಗಳ ಬಗ್ಗೆ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗೊಬ್ಬರವಾಡಿಯ ಸೇವಾಲಾಲ ಆಶ್ರಮದ ಬಳಿರಾಮ ಮಹಾರಾಜ, ವಿಶ್ವ ಹಿಂದೂ ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ್ಯ ಅಧ್ಯಕ್ಷರಾದ ಲಿಂಗರಾಜಪ್ಪ ಅಪ್ಪ, ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಖಗೇಶನ್ ಪಟ್ಟಣಶೆಟ್ಟಿ, ಸಾಂದೀಪನಿ ಶಾಲೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ. ಕಡೇಚೂರು, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ಗುಡ್ಡ, ಸಾಂದೀಪನಿ ಶಾಸನ ಸಮಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಪೊಲೀಸ್ ಪಾಟೀಲ್ ಮಾತನಾಡಿದರು.

ಕವಿತಾ ಕುಲಕರ್ಣಿ ವೈಯಕ್ತಿಕ ಗೀತೆಯನ್ನು ಹಾಡಿದರು. ಸಾಂದೀಪನಿ ಹಿರಿಯ ಪ್ರಾಥಮಿಕ ಶಾಲೆ ಸಹ ಕಾರ್ಯದರ್ಶಿ ಶೇಷಾದ್ರಿ ಕುಲಕರ್ಣಿ ನಿರೂಪಿಸಿದರು. ಶ್ರೀಮಂತ ನವಲ್ದಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.