ಶಹಾಬಾದ್: ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಪರಿಸರ ಸಂಕ್ಷಣೆ ಮತ್ತು ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಮೂಹಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ’ ಎಂದು ಸಂತ ಥಾಮಸ್ ಶಾಲೆಯ ಫಾದರ್ ಜೇರಾಲ್ಡ್ ಸಾಗರ್ ಹೇಳಿದರು.
ನಗರದ ಸಂತ ಥಾಮಸ್ ಶಾಲೆಯಲ್ಲಿ ಶನಿವಾರ ಶಾಲಾ ಚಟುವಟಿಕೆ ಪ್ರಾರಂಭೋತ್ಸವ ಹಾಗೂ ಪರಿಸರ ದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪರಿಸರ ಕಾಳಜಿ ಬಗ್ಗೆ ಇಂದಿನ ಯುವಕರು ಆಸಕ್ತಿ ತೋರುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದ್ದು ಯುವಕರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ’ ಎಂದರು.
ಕೆನರಾ ಬ್ಯಾಂಕಿನ ಅಧಿಕಾರಿ ಪ್ರತೀಕ ವಾಗ್ಮಾರೇ ಮಾತನಾಡಿ, ‘ಇಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟರೆ ಮುಗಿಯುವುದಿಲ್ಲ. ಪ್ರತಿ ದಿನ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಮುಖ್ಯಶಿಕ್ಷಕಿ ಸಿಸ್ಟರ್ ಕಾಣಿಕ್ಯ ಮೇರಿ, ಪತ್ರಕರ್ತ ವಾಸು ಚವಾಣ್, ಇಮಾನುವೆಲ್, ಪ್ರಿಯಾ ಓಝಾ, ಪಲ್ಕ್ ಮಂತ್ರಿ, ಅದಿತಿ ರಾಠಿ, ಸಿಸ್ಟರ್ ಲಲಿತಾ, ಸಿಸ್ಟರ್ ಮರಿಯಾ, ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಶಿಸ್ತು ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ನಾಯಕತ್ವ ಸಮಿತಿ ರಚಿಸಿ ಪದಗ್ರಹಣ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.